ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲ್ ಭಾವಚಿತ್ರದ ಬ್ಯಾನರ್ ಗೆ ಶ್ರದ್ಧಾಂಜಲಿ, ಚಪ್ಪಲಿ ಹಾರ ಪ್ರಕರಣ | ಪೊಲೀಸ್ ದೌರ್ಜನ್ಯ ಆರೋಪಕ್ಕೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಪಶ್ಚಿಮ ವಲಯ ಐಜಿಪಿಗೆ ಸೂಚನೆ

ಪುತ್ತೂರು: ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾ‌ರ್ ಕಟೀಲ್‌ ಅವರ ಭಾವಚಿತ್ರವಿದ್ದ ಬ್ಯಾನರ್‌ಗೆ ಶ್ರದ್ಧಾಂಜಲಿ ಬರಹದೊಂದಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪದ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಪಶ್ಚಿಮ ವಲಯ ಐಜಿಪಿಯವರಿಗೆ ಸೂಚನೆ ನೀಡಿದೆ.

ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕದ ದಿನದಲ್ಲಿ ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರದೊಂದಿಗೆ,ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದು ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಬಳಿ ಬ್ಯಾನ‌ರ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಲಾಗಿತ್ತು.ಈ ಕುರಿತು ನಗರಸಭೆಯ ಆಯುಕ್ತ ಮಧು ಎಸ್.ಮನೋಹರ್ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಿಂದೂ ಸಂಘಟನೆಯ 9 ಕಾರ್ಯಕರ್ತರನ್ನು ಆರೋಪಿಗಳೆಂದು ಬಂಧಿಸಿ ಅವರ ಮೇಲೆ ತೀವ್ರ ರೀತಿಯ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಲಾಗಿತ್ತು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಪೊಲೀಸ್ ದೌರ್ಜನ್ಯಕ್ಕೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ನರಿಮೊಗರು ನಿವಾಸಿಗಳಾದ ವಿಶ್ವನಾಥ್ ಮತ್ತು ಮಾಧವ ಎಂಬವರನ್ನು ಆರಂಭದಲ್ಲಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಅವರು ನೀಡಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ಮುಂದುವರಿಸಿ ನರಿಮೊಗ್ರು ನಿವಾಸಿಗಳಾದ ಅಭಿ ಯಾನೆ ಅವಿನಾಶ್, ಶಿವರಾಮ್, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷಿತ್ ಮತ್ತು ಗುರುಪ್ರಸಾದ್‌ ಎಂಬವರನ್ನು ಬಂಧಿಸಿದ್ದರು. ಈ  ಮಾಹಿತಿ ತಿಳಿದು ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾ‌ರ್ ಪುತ್ತಿಲ ತಡರಾತ್ರಿ ಡಿವೈಎಸ್ಪಿ ಕಚೇರಿಗೆ ತೆರಳಿ ವಿಚಾರಿಸಿದ್ದರು. ಬಳಿಕ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಆರೋಪಿಗಳನ್ನು ಬಿಡುಗಡೆಗೊಳಿಸಿದ್ದರು.































 
 

ಆರೋಪಿತ ಯುವಕರನ್ನು ಪೊಲೀಸರು ಬಂಧಿಸಿ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಡಿವೈಎಸ್ಪಿ ಡಾ|ವೀರಯ್ಯ ಹಿರೇಮಠ ಅವರ ನೇತೃತ್ವದಲ್ಲಿಯೇ ಪೊಲೀಸರು ಹಲ್ಲೆ ಮಾಡಿದ್ದರು ಎಂದು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಯುವಕರು ಆರೋಪಿಸಿದ್ದರು. ಪೊಲೀಸ್‌ ದೌರ್ಜನ್ಯ ಪ್ರಕರಣದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತಲ್ಲದೆ ಸಾರ್ವಜನಿಕವಾಗಿಯೂ ಆಕ್ರೋಶ ವ್ಯಕ್ತವಾಗಿ ತಪ್ಪಿತಸ್ಥ ಪೊಲೀಸರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿತ್ತು. ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಯುವಕ ಅವಿನಾಶ್‌ ಎಂಬವರ ತಂದೆ ವೇಣುನಾಥ ನರಿಮೊಗರು ಎಂಬವರು ನೀಡಿದ್ದ ದೂರಿನ ಮೇರೆಗೆ ಪುತ್ತೂರು ಡಿವೈಎಸ್ಪಿ, ಗ್ರಾಮಾಂತರ ಠಾಣೆಯ ಪಿಎಸ್‌ಐ ಹಾಗೂ ಗ್ರಾಮಾಂತರ ಕಾನ್‌ಸ್ಟೇಬಲ್‌ ಹರ್ಷಿತ್‌ರವರ ವಿರುದ್ಧ ಸೆಕ್ಷನ್ 323, 324, 506ಡಿ/ 3 34 ಐಪಿಸಿಯಡಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆಗೆ ಸಂಬಂಧಿಸಿ ಸಂಪ್ಯದ ಆಗಿನ ಎಸ್.ಐ.ಶ್ರೀನಾಥ್ ರೆಡ್ಡಿ ಮತ್ತು ಕಾನ್‌ಸ್ಟೇಬಲ್‌ ಹರ್ಷಿತ್ ಅವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಡಿವೈಎಸ್ಪಿ ವಿರುದ್ಧವೂ ಕ್ರಮಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿತ್ತು. ಘಟನೆ ಕುರಿತು ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳುವುದಾಗಿ ಆಗಿನ ಎಡಿಜಿಪಿ ಅಲೋಕ್ ಕುಮಾರ್ ಭರವಸೆ ನೀಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಡಿವೈಎಸ್ಪಿ ವೀರಯ್ಯ ಹಿರೇಮಠ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು.ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಅವರು ಬಳಿಕ ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಪೊಲೀಸ್‌ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ವಕೀಲ ಗಿರೀಶ್ ಭಾರದ್ವಾಜ್ ಅವರು ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕಾನೂನು ಕ್ರಮಕೈಗೊಂಡು ನೊಂದ ಯುವಕರಿಗೆ ನ್ಯಾಯ ಒದಗಿಸಿಕೊಡುವಂತೆ ಅವರು ದೂರಿನಲ್ಲಿ ಆಗ್ರಹಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ, ಪೊಲೀಸ್ ದೌರ್ಜನ್ಯ ಪ್ರಕರಣದ ಆರೋಪದ ದೂರಿನ ಕುರಿತು ತನಿಖೆ ನಡೆಸಿ ಇದೇ ಏಪ್ರಿಲ್ 4 ರೊಳಗೆ ವರದಿಯನ್ನು ಆಯೋಗಕ್ಕೆ ಕಳುಹಿಸುವಂತೆ ಮಂಗಳೂರು ಪಶ್ಚಿಮ ವಲಯ ಆರಕ್ಷಕ ಮಹಾನಿರೀಕ್ಷಕರಿಗೆ ಆಯೋಗ ಆದೇಶ ನೀಡಿದೆ. ದೂರುದಾರ ಅವಿನಾಶ್ ನೀಡಿರುವ ದೂರು ಅರ್ಜಿಯಲ್ಲಿ ಆಪಾದಿಸಿರುವ ವಿಚಾರ ನಿಜವೇ ಆಗಿದ್ದಲ್ಲಿ ಅದು ಸದರಿ ನೊಂದ ವ್ಯಕ್ತಿಗಳ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಆಯೋಗದ ಸದಸ್ಯ ಎಸ್‌.ಕೆ.ವಂಟಿಗೋಡಿ ಅವರು ಪಶ್ಚಿಮ ವಲಯ ಐಜಿಪಿಯವರಿಗೆ ಬರೆದ ಸೂಚನೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top