ವಿಟ್ಲ: ಕನ್ಯಾನ ಗ್ರಾಮದ ದೇಲಂತಬೆಟ್ಟು ಹಿ. ಪ್ರಾ. ಶಾಲೆಯ ಅಮೃತ ಮಹೋತ್ಸವ ‘ಅಮೃತ ಸಿಂಚನ’ ಕಾರ್ಯಕ್ರಮ ಜ.13ರಂದು ನಡೆಯಲಿದೆ.
1948 ಜೂ.1ರಂದು ಆರಂಭವಾದ ಈ ಶಾಲೆಗೆ 75 ವರ್ಷ ತುಂಬಿದ್ದು, ಹಳೆ ವಿದ್ಯಾರ್ಥಿಗಳು, ಅಮೃತ ಮಹೋತ್ಸವ ಸಮಿತಿ ಮತ್ತು ಶಾಲಾಭಿವೃದ್ಧಿ ಸಮಿತಿ ಜತೆಗೂಡಿ ಅಮೃತ ಮಹೋತ್ಸವವವನ್ನು ಆಚರಿಸಲಿದೆ ಎಂದು ಸಮಿತಿಯ ಅಧ್ಯಕ್ಷ ಡಿ. ಶ್ರೀನಿವಾಸ್ ತಿಳಿಸಿದ್ದಾರೆ.
ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಡಿ. ನಾರಾಯಣ ರಾವ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಬಯಲು ನೃತ್ಯ, ಪ್ರತಿಭಾ ಪುರಸ್ಕಾರ, ಪುಟಾಣಿಗಳ ಹಬ್ಬ ನಡೆಯಲಿದೆ.
ಎಂ.ಅಪೂರ್ವ ಅನಂತರಾವ್ ಪುಟಾಣಿಗಳ ಹಬ್ಬ ಉದ್ಘಾಟಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಲಿದ್ದಾರೆ. ಬಳಿಕ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಉದಯಶಂಕರ ದೇಲಂತಬೆಟ್ಟು ಚಾಲನೆ ನೀಡಲಿದ್ದಾರೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಡಿ.ಬಿ.ಅಬ್ದುಲ್ ರಹಿಮಾನ್, ಎಸ್ಡಿಎಂಸಿ ಅಧ್ಯಕ್ಷ ಬಿ.ಕೆ.ಇಬ್ರಾಹಿಂ, ಗ್ರಾ.ಪಂ.ಸದಸ್ಯ ಮೊದಿನ್ಕುಂಞಿ ಬರಿಕಟ್ಟೆ, ಗೌರವ ಸಲಹೆಗಾರ ಡಿ.ನಾರಾಯಣ ರಾವ್, ಕಾನೂನು ಸಲಹೆಗಾರ ಡಿ.ಬಿ.ಅಬ್ದುಲ್ಖಾದರ್, ಕೋಶಾಧಿಕಾರಿ ಶಿವರಾಮ ಆಚಾರ್ಯ, ಪ್ರಚಾರ ಸಮಿತಿಯ ರಾಜೇಶ್ ಉಪಸ್ಥಿತರಿದ್ದರು.