ಪುತ್ತೂರು: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಮುಂಬರುವ ಯೋಜನೆಗಳ ಕುರಿತ ಸಲಹಾ ಸಮಿತಿಯ ಪೂರ್ವಭಾವಿ ಸಭೆ ಪುತ್ತೂರು ರೋಟರಿ ಮನಿಷಾ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಸಂಸ್ಥೆಯ ಮುಂದಿನ ಮಹತ್ವಪೂರ್ಣ ಯೋಜನೆಗಳ ಸಹಿತ “ಕಲ್ಪ ವಿಕಾಸ ” ಮಹತ್ವಾಕಾಂಕ್ಷಿ ಯೋಜನೆಯ ರೂಪು-ರೇಷೆಗಳ ಬಗ್ಗೆ, ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಚರ್ಚಿಸಿ, ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಸಾವಯವ ತೆಂಗು ಕೃಷಿಗೆ ಉತ್ತೇಜನವನ್ನು ನೀಡುವುದರ ಜೊತೆಗೆ ವೈಜ್ಞಾನಿಕ ಕೃಷಿ ಬೆಳವಣಿಗೆಗೆ ಪ್ರೋತ್ಸಾಹವನ್ನು ನೀಡಲು ಹಾಗೂ ತೆಂಗು ಸಂಸ್ಥೆಯ ಪತ್ರಿಕೆ ಬಿಡುಗಡೆ ಕುರಿತು ಚರ್ಚಿಸಲಾಯಿತು.
ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಲಹಾ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಸಲಹಾ ಸಮಿತಿ ಅಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ಗೌರವ ಅಧ್ಯಕ್ಷರಾಗಿ ಕಡಮಜಲು ಸುಭಾಷ್ ರೈ, ಕಾನೂನು ಸಲಹೆಗಾರರಾಗಿ ಚಿದಾನಂದ ಬೈಲಾಡಿ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಸಲಹೆಗಾರರಾಗಿ ಬದನಾಜೆ ಶಂಕರ್ ಭಟ್, ಕೃಷಿ ಮಾಧ್ಯಮ ಸಲಹೆಗಾರರಾಗಿ ಕುಮಾರ್ ಪೆರ್ನಾಜೆ, ಕೃಷಿ ಅಭಿವೃದ್ಧಿ ಸಲಹೆಗಾರರಾಗಿ ಪ್ರಭಾಕರ್ ಮಯ್ಯ, ಸುಸ್ಥಿರ ಕೃಷಿ ಸಲಹೆಗಾರರಾಗಿ ಅಮೈ ಮಾಲಿಂಗ ನಾಯ್ಕ, ಸಾವಯವ ಕೃಷಿ ಸಲಹೆಗಾರರಾಗಿ ಗಣಪಯ್ಯ ಭಟ್, ಯೋಜನೆಯ ಅಭಿವೃದ್ಧಿ ಸಲಹೆಗಾರರಾಗಿ ಐತ್ತೂರು ಪೂವಪ್ಪ ಗೌಡ, ಜಲ ಸಂರಕ್ಷಣೆ ಸಲಹೆಗಾರರಾಗಿ ಡೇವಿಡ್ ಜೈಮಿ ಕೊಕ್ಕಡ ಅರವರನ್ನು ಆಯ್ಕೆ ಮಾಡಲಾಯಿತು.
ಸಂಸ್ಥೆಯ ಅಧ್ಯಕ್ಷ ಕುಸುಮಾಧರ್ ಎಸ್. ಕೆ. ಮಾತನಾಡಿ, ಸಲಹಾ ಸಮಿತಿಯಿಂದ ಬರುವ ಸಲಹೆಗಳು ಸಂಸ್ಥೆ ಹಾಗೂ ರೈತರ ಬೆಳವಣಿಗೆಗೆ ಮಹತ್ವಪೂರ್ಣ ಎಂದು ತಿಳಿಸಿದರು.
ಸಭೆಯಲ್ಲಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚೇತನ್ ಎ, ಸಂಸ್ಥೆಯ ಮುಖ್ಯ ಸಲಹೆಗಾರ, ಯತಿಕಾರ್ಪ್ ಇಂಡಿಯಾ ಪ್ರೈ. ಲಿ. ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತೀಶ ಕೆ. .ಎಸ್., ಆಡಳಿತ ನಿರ್ದೇಶಕರಾದ ಗಿರಿಧರ್ ಸ್ಕಂದ, ಲತಾ ಕೆ , ವಸಂತ ಕೆ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.