ಬಳ್ಪ; ಬಳ್ಪ ಗ್ರಾಮ ಪಂಚಾಯಿತಿಯಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ಮೂಲಕ 58 ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ಅಭಿವೃದ್ಧಿ ನಡೆದಿರುವುದು ದೇಶಕ್ಕೆ ಮಾದರಿ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಭಗವಂತ ಖೂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬುಧವಾರ ಬಳ್ಪ – ಕೇನ್ಯದ ಗ್ರಾಮ ಉತ್ಸವ ಸಮಿತಿ ಆಶ್ರಯದಲ್ಲಿ ನಡೆದ ಸಂಸದರ ಆದರ್ಶ ಗ್ರಾಮದ ಗ್ರಾಮೋತ್ಸವ -2024 ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಗ್ರಾಮದಲ್ಲೂ ಕಡುಬಡವರ ಅಭಿವೃದ್ಧಿಗಾಗಿ ಸಂಸದರ ಆದರ್ಶ ಗ್ರಾಮದ ಜೊತೆ ಹಲವು ಯೋಜನೆಗಳನ್ನು ಕೇಂದ್ರ ಸರಕಾರ ಜಾರಿ ಮಾಡಿದೆ. ವಿಕಸಿತ ಭಾರತ ನಮ್ಮ ಕನಸಲ್ಲ. ಅದು ನನಸಾಗುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಯುತ್ತಿದೆ. ಸಂಸದರ ಆದರ್ಶದ ಜೊತೆ ಎಲ್ಲರಿಗೂ ಆರೋಗ್ಯ, ಶಿಕ್ಷಣ, ಸೂರು ಸೇರಿದಂತೆ ಎಲ್ಲರೂ ನೆಮ್ಮದಿಯಿಂದ ಬದುಕಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದು ಹೇಳಿದ ಅವರು, ಮಂಗಳೂರಿನಲ್ಲಿ 1000 ಕೋಟಿ ರೂ. ವೆಚ್ಚದ ಪ್ಲಾಸ್ಟಿಕ್ ಪಾರ್ಕ್ ಯೋಜನೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಗ್ರಾಮ ವಿಕಾಸ ಆಗದೇ ದೇಶ ವಿಕಾಸ ಸಾಧ್ಯವಿಲ್ಲ. ವ್ಯಕ್ತಿ ವಿಕಾಸ ಆಗದೇ ವ್ಯಕ್ತಿತ್ವ ವಿಕಾಸ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಳ್ಪ ಗ್ರಾಮದಲ್ಲಿ ಅಭಿವೃದ್ಧಿಯ ಪಥದೊಂದಿಗೆ ಆದರ್ಶದ ಬೆಳಕು ಮೂಡಿದೆ. ಜಾಗತೀಕರಣದ ಜತೆ ಭಾರತೀಕರಣ ಬೇಕಾಗಿದೆ. ಭಾರತೀಯತೆ ಎಲ್ಲಿ ಇದೆಯೋ ಅಲ್ಲಿ ಆಧ್ಯಾತ್ಮದ ಬೆಳಕು ಇರುತ್ತದೆ ಎಂದು ನುಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಆದರ್ಶ ಗ್ರಾಮದ ಯೋಜನೆಯಲ್ಲಿ ಈಗಾಗಲೇ ಶೇ. 90 ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಆದರ್ಶ ಗ್ರಾಮದ ಮೂಲಕ ಮೂಲ ಸೌಕರ್ಯ, ಕೆರೆ, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ರಸ್ತೆಯ ಅಭಿವೃದ್ಧಿ ಸೇರಿದಂತೆ ಸುಮಾರು 58 ಕೋಟಿ ರೂಪಾಯಿಯ ಅನುದಾನ ಬಳ್ಪ – ಕೇನ್ಯ ಗ್ರಾಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಳ್ಪದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕರಾದ ಭಾಗೀರಥಿ ಮುರುಳ್ಯ, ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ಎಸ್. ಅಂಗಾರ, ಎಂ.ಆರ್.ಪಿ.ಎಲ್. ಮಹಾ ಪ್ರಬಂಧಕ ಕೃಷ್ಣರಾಜ್ ಹೆಗ್ಡೆ, ಬಳ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಕಾರ್ಜೆ, ಉದ್ಯಮಿ ರೋನ್ ರೋಡ್ರಿಗಸ್, ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ವಿನೋದ್ ಬೊಳ್ಮಲೆ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಹರೀಶ್ ಕಂಜಿಪಿಲಿ ಮೊದಲಾದವರು ಉಪಸ್ಥಿತರಿದ್ದರು.