ಪುತ್ತೂರು: 7ನೇ ತರಗತಿ ವಿದ್ಯಾರ್ಥಿಯಿಂದ ವ್ಯಕ್ತಿಯೋರ್ವರು ತ್ಯಾಜ್ಯ ತೆರವು ಮಾಡಿಸಿರುವ ಘಟನೆ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಮಾಜಿ ಶಾಸಕ ಸಂಜೀವ ಮಠಂದೂರು ಅವರು ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸುವ ಭರವಸೆ ನೀಡಿದ್ದಾರೆ.
ವಿದ್ಯಾರ್ಥಿಯ ತಂದೆ ಬಿಳಿಯೂರು ಗ್ರಾಮದ ನಡುಮನೆ ನಿವಾಸಿ ವಾಸಪ್ಪ ನಾಯ್ಕ ಎಂಬವರು ದೂರು ನೀಡಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕನಿಗೆ ಮಾನಸಿಕ ಹಿಂಸೆ ನೀಡಿರುವ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ. ಮಾತ್ರವಲ್ಲ, ತನ್ನ ಮಗನಿಗೆ ನಿರ್ಭೀತಿಯಿಂದ ಶಾಲೆಗೆ ಹೋಗಲು ಅವಕಾಶ ಮಾಡಿ ಕೊಡುವಂತೆ ಒತ್ತಾಯಿಸಿದ್ದಾರೆ.
ದೂರುದಾರರ ಮೂರನೇ ಪುತ್ರ ಕಾರ್ತಿಕ್ ಎಂಬ ವಿದ್ಯಾರ್ಥಿಯೇ ದೌರ್ಜನ್ಯಕ್ಕೆ ಒಳಗಾದವ. ಕಳೆದ ಕೆಲ ದಿನಗಳಿಂದ ಈತ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದ. ಈ ಬಗ್ಗೆ ವಿಚಾರಿಸಿದಾಗ ತಾನು ಶಾಲೆಗೆ ಹೋಗುವ ದಾರಿ ಮಧ್ಯದಲ್ಲಿ ಕೋಡ್ಲೆ ನಿವಾಸಿ ಮಹಾಬಲ ಭಟ್ ಅವರ ಪತ್ನಿ ಗಂಗಾವತಿ ಭಟ್ ಎಂಬವರು, ದಾರಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ತ್ಯಾಜ್ಯ ತೆಗೆದು ಹೋಗುವಂತೆ ತಾಕೀತು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಗಂಗಾವತಿ ಭಟ್ ಅವರನ್ನು ಭೇಟಿಯಾಗಿರುವ ದೂರುದಾರರು, ಘಟನೆಯ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಅವರು ಅವಾಚ್ಯವಾಗಿ ನಿಂದಿಸಿದ್ದಾರೆ. ಮಾತ್ರವಲ್ಲ, ತನ್ನ ಗಂಡನಿಗೆ ವೀಡಿಯೋ ಕರೆ ಮಾಡಿರುವ ಆರೋಪಿಯು, ಜಾತಿ ನಿಂದನಾತ್ಮಕ ಪದಗಳಿಂದ ಮಾತನಾಡಿದ್ದಾರೆ. ಮಾತ್ರವಲ್ಲ, ಸಂಚರಿಸುವ ದಾರಿ ಅವರದ್ದೆಂದೂ, ಅದರಲ್ಲಿ ಸಂಚರಿಸಬೇಕಾದರೆ ಅವರು ಹೇಳಿದಂತೆ ಮಕ್ಕಳು ತ್ಯಾಜ್ಯವನ್ನು ತೆಗೆಯಬೇಕೆಂದು ತಾಕೀತು ಮಾಡಿದ್ದಾರೆ. ಇದು ತಲೆತಲಾಂತರದಿಂದ ಪರಿಸರದ ಮಂದಿ ನಡೆದಾಡಲು ಬಳಸುತ್ತಿದ್ದ ಕಾಲು ದಾರಿ. ಆದರೆ ಗಂಗಾವತಿ ಭಟ್ ಅವರು ಕಾನೂನು ಬಾಹಿರವಾಗಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ತನ್ನ ಮಗನಿಂದ ತ್ಯಾಜ್ಯ ತೆಗೆಸಿ ಅವಮಾನ ಮಾಡಿರುತ್ತಾರೆ. ಈ ಮೂಲಕ ಆತನಿಗೆ ಮಾನಸಿಕ ಹಿಂಸೆ ನೀಡಿ, ಶಾಲೆಗೆ ಹೋಗಲು ಹಿಂದೇಟು ಹಾಕುವಂತೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.