ಜ. 12ರಂದು ವಿವೇಕಾನಂದ ಜಯಂತಿ ಆಚರಣೆ, ಬೊಂಬೆಯಾಟ | ಜ. 13ರಿಂದ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ಸರಣಿ ವಿಚಾರ ಸಂಕಿರಣ

ಪುತ್ತೂರು: ನೆಹರುನಗರ ವಿವೇಕಾನಂದ ಕಾಲೇಜಿನ ಆವರಣದ ವಿವೇಕಾನಂದ ಬಯಲು ಮಂದಿರದಲ್ಲಿ ಜನವರಿ 12ರಂದು ವಿವೇಕಾನಂದ ಜಯಂತಿ ನಡೆಯಲಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ವಿಚಾರ ಸಂಕಿರಣ ಜ. 13ರಿಂದ 22ರವರೆಗೆ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ಪರಿಕಲ್ಪನೆಯಲ್ಲಿ ವಿವೇಕಾನಂದ ಜಯಂತಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ. ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಲಿದ್ದು, ಖ್ಯಾತ ವಾಗ್ಮಿ ಹಾಗೂ ಅಂಕಣಗಾರ ಪ್ರಕಾಶ್ ಮಲ್ಪೆ ಮುಖ್ಯ ಅತಿಥಿಯಾಗಿರುವರು ಎಂದರು.

ವಿವೇಕಾನಂದ ಆವರಣದಲ್ಲಿ ನಡೆಯಲಿರುವ ಈ ವಿವೇಕಾನಂದ ಜಯಂತಿಯಲ್ಲಿ ವಿವೇಕಾನಂದ ಪದವಿ ಕಾಲೇಜು, ವಿವೇಕಾನಂದ ಪದವಿ ಪೂರ್ವ ಕಾಲೇಜು, ವಿವೇಕಾನಂದ ಸ್ನಾತಕೋತ್ತರ ಕಾಲೇಜು, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್, ವಿವೇಕಾನಂದ ಸೆಂಟ್ರಲ್ ಸ್ಕೂಲ್ (ಸಿಬಿಎಸ್‌ಸಿ), ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್.), ವಿವೇಕಾನಂದ ಕಾನೂನು ಕಾಲೇಜು, ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸ್ಯೂಟಿಕಲ್ ಸೈನ್ಸ್ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದಡಿ ಇರುವ ಪ್ರೌಢಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳು, ಹೆತ್ತವರು, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.































 
 

ಬೆಂಗಳೂರು ರಂಗ ಪುತ್ಥಳಿ ಕಲಾವಿದರಿಂದ ಬೊಂಬೆಯಾಟ:

ಸಭಾ ಕಾರ್ಯಕ್ರಮದ ನಂತರ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಆಧಾರಿತ ಪ್ರಸಂಗವನ್ನು ಸೂತ್ರ ಮತ್ತು ಸಲಾಕೆ ಬೊಂಬೆಯಾಟದ ಮೂಲಕ ಬೆಂಗಳೂರು ರಂಗ ಪುತ್ಥಳಿ ಬೊಂಬೆಯಾಟದ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ. 2024ರ ವಿವೇಕ ಜಯಂತಿಯ ವಿಶೇಷ ಆಕರ್ಷಣೆಯಾಗಿ ಭರತ ಖಂಡದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ರಾಮಾಯಣದ ನೈಜ ಘಟನಾಧಾರಿತ ಚಿತ್ರ ಪ್ರದರ್ಶನವಿರಲಿದೆ ಎಂದು ವಿವರಿಸಿದರು.

ಸರಣಿ ವಿಚಾರ ಸಂಕಿರಣ:

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದ ಪ್ರಯುಕ್ತ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಜನವರಿ 13ರಿಂದ 22ರವರೆಗೆ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನವರಿ 13ರಂದು ಬೆಳಿಗ್ಗೆ 9.30ಕ್ಕೆ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭ ಜನವರಿ 22ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ ಪ್ರಭಾಕರ್ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.

ಜ. 13ರಂದು ಬೆಳಿಗ್ಗೆ 10ಕ್ಕೆ ಸುವರ್ಣ ಮಹೋತ್ಸವ ಸಭಾಭವನದಲ್ಲಿ ರಾಮನೀತಿ ವಿಷಯದಲ್ಲಿ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ವಿಚಾರ ಸಂಕಿರಣ ನಡೆಸಿಕೊಡಲಿದ್ದಾರೆ. 11.30ಕ್ಕೆ ಕೇಶವ ಸಂಕಲ್ಪ ಸಭಾಭವನದಲ್ಲಿ ಕೊಲ್ನಾಡು ಮಂಚಿ ಸರಕಾರಿ ಪ್ರೌಢಶಾಲಾ ಸಹಶಿಕ್ಷಕಿ ವಿಜಯಲಕ್ಷ್ಮೀ ಕಟೀಲ್ ಅವರು ರಾಮಾಯಣ ನಿಧಿ – ಸೀತೆ ವಿಚಾರ ಮಂಡಿಸಲಿದ್ದಾರೆ.

ಜ. 14ರಂದು ಸಂಜೆ 5.30ರಿಂದ ರಾತ್ರಿ 9ರವರೆಗೆ ತೆಂಕಿಲ ವಿವೇಕ ನಗರದ ವಿವೇಕಾನಂದ ಶಾಲಾ ಸಂಕೀರ್ಣದಲ್ಲಿ ವೈಭವದ ಅಯೋಧ್ಯೆಯ ಸಮಗ್ರ ಕಥನವಾಗಿ ಶ್ರೀ ರಾಮ ಕಥಾ ವೈಭವ ನಡೆಯಲಿದೆ.

ಜ. 16ರಂದು ಬೆಳಿಗ್ಗೆ 11ಕ್ಕೆ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಿ.ಬಿ.ಎಸ್.ಇ. ಇದರ ನೇತಾಜಿ ಸಭಾಭವನದಲ್ಲಿ ನಿವೃತ್ತ ಅಧ್ಯಾಪಕ ಭಾಸ್ಕರ ಶೆಟ್ಟಿ ಅವರು ಶ್ರೀರಾಮನ ಆದರ್ಶಗಳು ವಿಷಯದಲ್ಲಿ ಮಾತನಾಡಲಿದ್ದಾರೆ.

ಜ. 17ರಂದು ಬೆಳಿಗ್ಗೆ 9.30ಕ್ಕೆ ವಿವೇಕಾನಂದ ಇನ್’ಸ್ಟಿಟ್ಯೂಟ್ ಆಫ್ ಫಾರ್ಮಸ್ಯೂಟಿಕಲ್ ಸೈನ್ಸ್ ನ ಪಿ.ಜಿ. ಬ್ಲಾಕ್ ಕಟ್ಟಡದ ಎ.ವಿ. ಹಾಲ್ ನಲ್ಲಿ ಯಕ್ಷಗಾನ ಅರ್ಥಧಾರಿ ಹರೀಶ್ ಬೊಳಂತಿಮೊಗರು ಸಂಜೀವಿನಿ ವಿಷಯದಲ್ಲಿ ವಿಚಾರ ಮಂಡಿಸಲಿದ್ದಾರೆ.

ಜ. 18ರಂದು ಮಧ್ಯಾಹ್ನ 12ಕ್ಕೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಶ್ರೀ ರಾಮ ಸಭಾಭವನದಲ್ಲಿ ರಾಮಾಯಣದಲ್ಲಿ ತಾಂತ್ರಿಕತೆ ವಿಷಯದಲ್ಲಿ ಮೆಕ್ಯಾನಿಕಲ್ ವಿಭಾಗ ಎಚ್.ಓ.ಡಿ. ಡಾ. ಮನುಜೇಶ್ ಬಿ.ಜೆ., ಸಿವಿಲ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ರಾಜೇಶ್ ಆರ್. ಮಾತನಾಡಲಿದ್ದಾರೆ.

ಜ. 19ರಂದು ಬೆಳಿಗ್ಗೆ 10.30ಕ್ಕೆ ವಿವೇಕಾನಂದ ಪಾಲಿಟೆಕ್ನಿಕಿನ ಎ.ವಿ. ಹಾಲಿನಲ್ಲಿ ಹನುಮಂತನ ಪಾತ್ರದ ವೈಶಿಷ್ಟ್ಯವನ್ನು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಪ್ರಸ್ತುತಪಡಿಸಲಿದ್ದಾರೆ.

ಜ. 20ರಂದು ಬೆಳಿಗ್ಗೆ 9.30ಕ್ಕೆ ಕೇಶವ ಸಂಕಲ್ಪ ಸಭಾಭವನದಲ್ಲಿ A Discourse on Historical Background and Legal Perspective of a Historical case on Ramajanma Bhoomi V/s Babri Masjid ವಿಷಯದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಆರ್.ವಿ. ಚಂದ್ರಶೇಖರ್ ವಿಷಯ ಮಂಡಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ರೂಪಲೇಖಾ, ಕೋಶಾಧಿಕಾರಿ ಅಚ್ಯುತ ನಾಯಕ್, ಪತ್ರಿಕೋದ್ಯಮ ಉಪನ್ಯಾಸಕ ಅಕ್ಷಯ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top