ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ರಾಶಿ ಕೆ.ಸಿ. ಅವರ ಹೆಸರು ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.
ರಾಷ್ಟ್ರಗೀತೆಯನ್ನು 1 ಗಂಟೆ 40 ನಿಮಿಷ, 26 ಸೆಕೆಂಡ್ ನಲ್ಲಿ ಗರಿಷ್ಠ 116 ಬಾರಿ ನಿರಂತರವಾಗಿ ಹಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.
ರಾಶಿ ಈ ಹಿಂದೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್ ರೆಕಾರ್ಡ್ಸ್ ಯುನಿವರ್ಸಿಟಿ ಸಾಧನೆಯನ್ನು ಮಾಡಿರುತ್ತಾರೆ. ಸಂಗೀತ, ನೃತ್ಯ, ಭಾಷಣ, ಏಕಪಾತ್ರಾಭಿನಯ, ನಾಟಕ, ಯೋಗ, ಕಲಿಕೆಯಲ್ಲಿಯೂ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಅವರು ಚಂದ್ರಶೇಖರ ಬರೆಪ್ಪಾಡಿ ಮತ್ತು ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಜ್ಞಾನೇಶ್ವರಿ ದಂಪತಿ ಪುತ್ರಿ.
ಅವರ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು, ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ ಎಂ ಬಿ, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಶಿಕ್ಷಕಿ ಸರಸ್ವತಿ ಎಂ ಮತ್ತು ಶಿಕ್ಷಕ ಶಿಕ್ಷಕೇತರ ವೃಂದದವರು ಅಭಿನಂದಿಸಿದ್ದಾರೆ.