ಪುತ್ತೂರು: ಚಿಕ್ಕಮುಡ್ನೂರು, ಶಾಂತಿಗೋಡು ಮತ್ತು ನರಿಮೊಗರು ಗ್ರಾಮದ ಅಂದ್ರಟ್ಟದ ಸಂಪರ್ಕ ಸೇತುವೆಗೆ 2023ರ ಮಾರ್ಚ್ 19ರಂದು ಆಗಿನ ಶಾಸಕ ಸಂಜೀವ ಮಠಂದೂರು ಅವರು ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಅದೇ ಕಾಮಗಾರಿಗೆ ಈಗಿನ ಶಾಸಕ ಅಶೋಕ್ ಕುಮಾರ್ ರೈ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಅದೂ ಶಿಷ್ಟಾಚಾರವನ್ನು ಉಲ್ಲಂಘಿಸಿ. ಆದ್ದರಿಂದ ಈ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವಂತೆ ಶಾಂತಿಗೋಡು ಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಂ ಭಟ್ ಆಗ್ರಹಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದ್ರಟ್ಟದಲ್ಲಿ 2ನೇ ಬಾರಿಗೆ ಶಿಲಾನ್ಯಾಸ ನೆರವೇರಿಸಿ, ನಾಗರಿಕರಿಗೆ ತಪ್ಪು ಮಾಹಿತಿ ನೀಡುವ ಕೆಲಸವನ್ನು ಈಗಿನ ಶಾಸಕರು ಮಾಡುತ್ತಿದ್ದಾರೆ. ಅಂದ್ರಟ್ಟ ಸೇತುವೆಯ ಕಾಮಗಾರಿ ಮುಗಿದು, ಉದ್ಘಾಟನೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಮಾಡುತ್ತಾರೆ ಎಂದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಮತ್ತೊಮ್ಮೆ ಶಿಲಾನ್ಯಾಸ ನೆರವೇರಿಸುವುದು ಸರಿಯಲ್ಲ ಎಂದರು.
ಚಿಕ್ಕಮುಡ್ನೂರು ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಮಾತನಾಡಿ, ಅಂದ್ರಟ್ಟ ಸೇತುವೆ ನಿರ್ಮಾಣದ ಹಿಂದೆ ನಾವು ಸಾಕಷ್ಟು ಕೆಲಸ ನಿರ್ವಹಿಸಿದ್ದೇವೆ. ಮೂರು ಮನೆಗಳವರನ್ನು ಒಪ್ಪಿಸಿ, ಸೇತುವೆ ನಿರ್ಮಾಣಕ್ಕೆ ಅಗತ್ಯ ಜಾಗವನ್ನು ತೆಗೆಸಿಕೊಟ್ಟಿದ್ದೇವೆ. ಆಗಿನ ಶಾಸಕ ಸಂಜೀವ ಮಠಂದೂರು ಅವರು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಈ ಎಲ್ಲಾ ಶ್ರಮಗಳಿಗೆ ಬೆಲೆಯೇ ಇಲ್ಲದಂತೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬನ್ನೂರು ಹಾಗೂ ನರಿಮೊಗರು ಗ್ರಾಮ ಪಂಚಾಯತ್ ಸಂಧಿಸುವ ಪ್ರದೇಶವೇ ಅಂದ್ರಟ್ಟ. ಈ ಸೇತುವೆಗೆ ಸಂಬಂಧಪಟ್ಟಂತೆ ಯಾವುದೇ ಸರಕಾರಿ ಕಾರ್ಯಕ್ರಮ ಮಾಡುವುದಿದ್ದರೂ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳಿಗೆ ಶಿಷ್ಟಾಚಾರದಂತೆ ತಿಳಿಸಬೇಕಾಗಿರುವುದು ಕಡ್ಡಾಯ. ಆದರೆ ನಿನ್ನೆ ಶಾಸಕರು ನೆರವೇರಿಸಿರುವ ಶಿಲಾನ್ಯಾಸಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಮಂತ್ರಿಸಿಲ್ಲ. ಆದ್ದರಿಂದ ಇದು ಸರಕಾರಿ ಕಾರ್ಯಕ್ರಮವೋ ಅಥವಾ ಪಕ್ಷದ ಕಾರ್ಯಕ್ರಮವೋ ಎನ್ನುವುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನರಿಮೊಗರು ಗ್ರಾಪಂ ಅಧ್ಯಕ್ಷೆ ಹರಿಣಿ, ಸದಸ್ಯ ನವೀನ್ ರೈ ಶಿಬರ, ಬನ್ನೂರು ಗ್ರಾಪಂ ಸದಸ್ಯ ರಾಘವೇಂದ್ರ ಉಪಸ್ಥಿತರಿದ್ದರು.