ಉತ್ತರಪ್ರದೇಶ: ಮೈನ್‌ಪುರಿ ಜಿಲ್ಲೆಯಲ್ಲಿ ಅಜಾಗರೂಕತೆಯಿಂದ ಭೀಕರ ಅಪಘಾತವೇ ಸಂಭವಿಸಿದೆ. ಮಂಚಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಆರು ತಿಂಗಳ ಅವಳಿ ಕಂದಮ್ಮಗಳು ಸಜೀವ ದಹನವಾಗಿದ್ದಾರೆ.
ಮೈನ್‌ಪುರಿ ಜಿಲ್ಲೆಯ ಬೆಂಚಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೈನ್ಪುರಿ ರಸ್ತೆ ಬಳಿ ವಾಸಿಸುವ ಗೌರವ್ ಅಲಿಯಾಸ್ ದಿಲೀನ್ ಕುಮಾರ್ ಸೋಮವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದರು. ಮನೆಯಲ್ಲಿ ಅವರ ಪತ್ನಿ ರಜನಿ ಅವರ ಆರು ತಿಂಗಳ ಅವಳಿ ಹೆಣ್ಣು ಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಇದ್ದರು.
ರಜನಿ ಟೆರೇಸ್ನಲ್ಲಿರುವ ಕೋಣೆಯಲ್ಲಿ ನೇವಾರ್ ಕಾಟ್ ಮೇಲೆ ಮಕ್ಕಳನ್ನು ಮಲಗಿಸುತ್ತಿದ್ದರು. ಈ ವೇಳೆ ಹೆಣ್ಣುಮಕ್ಕಳಿಗೆ ಚಳಿ ಬಾರದಿರಲಿ ಎಂದು ಮಂಚದ ಕೆಳಗೆ ಬಾಣಲೆಯಲ್ಲಿ ಬೆಂಕಿ ಹಚ್ಚಿ ಮನೆಕೆಲಸ ಮಾಡತೊಡಗಿದರು ರಜನಿ.
ಸ್ವಲ್ಪ ಸಮಯದ ನಂತರ ರಜನಿ ಮನೆಯ ಮೇಲಿನ ಕೊಠಡಿಯಿಂದ ಹೊಗೆ ಬರುತ್ತಿರುವುದನ್ನು ನೆರೆಹೊರೆಯವರು ನೋಡಿದ್ದಾರೆ. ಕೊನೆಗೆ ಜನರು ಕೂಗಲಾರಂಭಿಸಿದ್ದಾರೆ. ಶಬ್ದ ಕೇಳಿದ ರಜನಿ ಛಾವಣಿಯ ಮೇಲಿರುವ ಕೋಣೆಗೆ ತಲುಪಿದಾಗ, ಶಾಕ್ ಆಗಿದ್ದಾಳೆ.
ರಜನಿ ಕಿರುಚಾಡುವುದನ್ನು ಕಂಡು ಅಕ್ಕಪಕ್ಕದ ಜನರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇದಾದ ನಂತರ ಜನರು ಗಂಭೀರವಾಗಿದ್ದ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಅಲ್ಲಿಂದ ಸೈಫೈ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಈ ವೇಳೆ ಮಾರ್ಗಮಧ್ಯೆ ಎರಡು ಅಮಾಯಕ ಜೀವಗಳು ಸಾವನ್ನಪ್ಪಿವೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ. ಇನ್ನೊಂದೆಡೆ ಅಪಘಾತದಲ್ಲಿ ಮುಗ್ಧ ಜೀವಗಳು ಸಾವನ್ನಪ್ಪಿದ ಬಳಿಕ ಪಾಲಕರು ಮತ್ತು ಕುಟುಂಬದ ಇತರ ಸದಸ್ಯರು ಕಣ್ಣೀರಿಡುತ್ತಿದ್ದು, ಘಟನೆಯಿಂದ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಘಟನೆಯ ಬಗ್ಗೆ ಮೈನ್ಪುರಿ ಎಸ್ಪಿ ವಿನೋದ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.