ಪುತ್ತೂರು: ಅಮೃತ ನಗರೋತ್ಥಾನ 2ನೇ ಹಂತದ 4.67 ಕೋಟಿ ರೂ. ಮತ್ತು ನಗರೋತ್ಥಾನ ಪ್ರೋತ್ಸಾಹ ಧನ 3 ಕೋಟಿ ರೂ. ಅನುದಾನದಡಿ ಕೈಗೊಳ್ಳುವ ಬೆದ್ರಾಳದ ಸೇತುವೆ ಸಹಿತ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಆಗಿನ ಶಾಸಕರು 2023ನೇ ಮಾರ್ಚ್ 8 ರಂದು ನೆರವೇರಿಸಿದ್ದಾರೆ. ಕಾಮಗಾರಿಯೂ ಪ್ರಗತಿಯಲ್ಲಿದೆ. ಆದರೆ ಇದೀಗ ಮತ್ತೊಮ್ಮೆ ಈಗಿನ ಶಾಸಕರು ಬೆದ್ರಾಳದಲ್ಲೇ ಅದೇ ಕಾಮಗಾರಿಗೆ ಶಿಲಾನ್ಯಾಸ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದ್ದಾರೆ.
ನಗರೋತ್ಥಾನದಲ್ಲಿ ಮೊದಲನೆ ಹಂತದಲ್ಲಿ 30 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಬಳಿಕ ಆಗಿನ ಶಾಸಕ ಸಂಜೀವ ಮಠಂದೂರು ಅವರ ಮುಂದಾಳತ್ವದಲ್ಲಿ ಮತ್ತೆ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. 30 ಕೋಟಿಯ ಯೋಜನೆಯಲ್ಲಿ ಪ್ರತಿ ವಾರ್ಡ್‌ಗೆ 25 ಲಕ್ಷ ರೂ.ನಂತೆ ಕಾಮಗಾರಿಯೂ ನಡೆಯುತ್ತಿದೆ. ಈ ನಡುವೆ ನಗರಸಭೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಅಂದಾಜು ಮೊತ್ತ 3 ಕೋಟಿಯ 3 ಪ್ಯಾಸೆಜ್ ಕಾಮಗಾರಿಗಳನ್ನು ಟೆಂಡರ್ ಮೂಲಕ ಹಾಸನದ 1ನೇ ದರ್ಜೆ ಗುತ್ತಿಗೆದಾರ ರಘುನಾಥ್ ವೈ ಆರ್. ಅವರಿಗೆ ಕಾರ್ಯಾದೇಶ ನೀಡಲಾಗಿತ್ತು.
2024ನೇ ಸೆ. 19 ರ ಒಳಗೆ ಗುತ್ತಿಗೆ ಕರಾರಿನಂತೆ ಮೂರು ಕಾಮಗಾರಿಗಳನ್ನು ಪೂರ್ಣಗೊಳಿಸಿ ನಗರಸಭೆಗೆ ಹಸ್ತಾಂತರಿಸಬೇಕೆಂದು ಆದೇಶ ಪತ್ರದಲ್ಲೂ ಇದೆ. ಕಾಮಗಾರಿಯೂ ನಡೆಯುತ್ತಾ ಇದೆ. ಮಾಜಿ ಶಾಸಕರು ಶಿಲಾನ್ಯಾಸ ಮಾಡಿದ ಕಾರ್ಯಕ್ರಮದ ವರದಿಗಳು ಪತ್ರಿಕೆಯಲ್ಲಿ ಬಂದಿದೆ. ಆದರೆ ಈಗಿನ ಶಾಸಕರು ಮಾಜಿ ಶಾಸಕರು ಮಾಡಿದ ಶಿಲಾನ್ಯಾಸಗಳಿಗೆ ಮತ್ತೊಮ್ಮೆ ಶಿಲಾನ್ಯಾಸ ಮಾಡುವ ಮೂಲಕ ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.