ಗಣೇಶ್ ಎನ್. ಕಲ್ಲರ್ಪೆ
ಪುತ್ತೂರು: ಕಡುಬೇಸಿಗೆಯಲ್ಲಿ ಸಂಜೀವಿನಿಯಾಗಿ ನೆರವಿಗೆ ಬರುತ್ತಿದ್ದ ಬೋರ್ ವೆಲ್ ಗಳು ಇನ್ನು ಮುಂದೆ ಮಳೆಕೊಯ್ಲಿನ ಭಾಗವಾಗಿ ಕಾಣಿಸಿಕೊಳ್ಳಲಿದೆ.
ಪುತ್ತೂರು ನಗರಸಭೆ ಆಡಳಿತ ಇಂತಹ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಪ್ರತಿ ಬೇಸಿಗೆಯ ಸಂದರ್ಭ ಡ್ಯಾಂ ಬತ್ತಿ ಹೋಗುವುದು ಕಳೆದ ಕೆಲ ವರ್ಷಗಳಿಂದ ಸಾಮಾನ್ಯ. ಇಂತಹ ಸಂದರ್ಭ ಬೋರ್ ವೆಲ್ ಗಳ ಮೊರೆ ಹೋಗಲಾಗುತ್ತಿತ್ತು. ಹೀಗೆ ಕೊರೆಯಿಸಲಾದ ಬೋರ್ ವೆಲ್ ಗಳ ಸಂಖ್ಯೆಯೇ 177. ಇನ್ನು ಮುಂದೆ ಈ ಬೋರ್ ವೆಲ್ ಗಳ ಅಗತ್ಯವಿಲ್ಲ. ಹಾಗೆಂದು ಆ ಬೋರ್ ವೆಲ್ ಗಳನ್ನು ಮುಚ್ಚುವುದೂ ಇಲ್ಲ. ಬದಲಾಗಿ ಮಳೆಕೊಯ್ಲಿನ ವ್ಯವಸ್ಥೆಯಾಗಿ ಬದಲಾಗಲಿದೆ.
ಪುತ್ತೂರು ನಗರ ವ್ಯಾಪ್ತಿಗೆ ನೀರು ಪೂರೈಕೆ ಮಾಡುತ್ತಿರುವ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ನೆಕ್ಕಿಲಾಡಿಯಲ್ಲಿರುವ ಡ್ಯಾಂ ತುಂಬಿದ್ದು, ಓವರ್ ಫ್ಲೋ ಆಗುತ್ತಿದೆ. ಸಾಮಾನ್ಯವಾಗಿ ಡಿಸೆಂಬರ್ ವೇಳೆಗೆ ಬರಿದಾಗುತ್ತಿದ್ದ ನೀರಿನ ಸೆಲೆ, ಈ ಬಾರಿ ಭರವಸೆ ತುಂಬಿಸಿದೆ. ಮಾತ್ರವಲ್ಲ, ಜಲಸಿರಿ ಯೋಜನೆಯ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ನೀರಿನ ವ್ಯವಸ್ಥೆಗೆ ಹೊಸ ಬಲ ತುಂಬಿದೆ.
ಜಲಸಿರಿ ಯೋಜನೆಯಡಿ 8.5 ಎಂ.ಎಲ್.ಡಿ. (ಮಿಲಿಯನ್ ಲೀಟರ್ ಪರ್ ಡೇ) ನೀರು ಸಂಗ್ರಹಣಾ ಸಾಮರ್ಥ್ಯದ ಘಟಕ ಈಗಾಗಲೇ ಕೆಲಸಕ್ಕೆ ತೆರೆದುಕೊಂಡಿದೆ. ಹಿಂದೆ ಇದ್ದ 6.8 ಎಂ.ಎಲ್.ಡಿ. ಸಾಮರ್ಥ್ಯದ ಘಟಕವನ್ನು ಮರುನವೀಕರಣಕ್ಕಾಗಿ ಕಾರ್ಯ ಸ್ಥಗಿತಗೊಳಿಸಲಾಗಿದೆ. ಇದು ಮುಂದಿನ 3 – 4 ತಿಂಗಳಲ್ಲಿ ಮತ್ತೆ ಕಾರ್ಯಾರಂಭ ಮಾಡುವ ವಿಶ್ವಾಸ ಇದೆ. ಹಾಗಾಗಿ ನಗರಸಭೆ ವ್ಯಾಪ್ತಿಗೆ ಒಟ್ಟು 15.3 ಎಂ.ಎಲ್.ಡಿ. ಸಾಮರ್ಥ್ಯದ ಘಟಕ ಸೇವೆಗೆ ಬಳಕೆಯಾಗಲಿದೆ. ಹಾಗೆಂದು, ನಗರಸಭೆ ವ್ಯಾಪ್ತಿಗೆ ಬೇಕಾಗಿರುವುದು 9 ಎಂ.ಎಲ್.ಡಿ. ಮಾತ್ರ.
ಇನ್ನು ಮುಂದಿನ ದಿನಗಳಲ್ಲಿ ನಗರಸಭೆ ವ್ಯಾಪ್ತಿಗೆ ಅಗತ್ಯವಿರುವಷ್ಟು ನೀರು ಜಲಸಿರಿ ಯೋಜನೆಯಿಂದಲೇ ಸಿಗಲಿದೆ. ಹಾಗಾಗಿ, ಈ ಹಿಂದೆ ನಗರಸಭೆ ವ್ಯಾಪ್ತಿಯಲ್ಲಿ ಬಳಸುತ್ತಿದ್ದ 177 ಬೋರ್ ವೆಲ್ ಗಳು ಇನ್ನು ಉಪಯೋಗಶೂನ್ಯವಾಗಲಿದೆ.
5 ಬೋರ್ ವೆಲ್ ಗಳಿಗೆ 15 ಲಕ್ಷ ರೂ.:
ಪುತ್ತೂರು ನಗರಸಭೆಯ 15ನೇ ಹಣಕಾಸು ಯೋಜನೆಯಡಿ ಈಗಾಗಲೇ 5 ಬೋರ್ ವೆಲ್ ಗಳನ್ನು ಮಳೆಕೊಯ್ಲಿಗೆ ಒಳಪಡಿಸಲಾಗಿದೆ. ಇದಕ್ಕಾಗಿ 15 ಲಕ್ಷ ರೂ.ವನ್ನು ಮೀಸಲಿಡಲಾಗಿದೆ. ಮುಂದೆ ಹಂತ ಹಂತವಾಗಿ ಉಳಿದ ಬೋರ್ ವೆಲ್ ಗಳನ್ನು ಮಳೆಕೊಯ್ಲಿನ ಯೋಜನೆಗೆ ಒಳಪಡಿಸುವ ಯೋಜನೆ ನಗರಸಭೆ ಮುಂದಿದೆ.
ಅಗತ್ಯಕ್ಕಿಂತ ಹೆಚ್ಚು ನೀರು:
ಜಲಸಿರಿ ಯೋಜನೆ ಅಂತಿಮ ಹಂತಕ್ಕೆ ತಲುಪಿದ್ದು, ಉದ್ಘಾಟನೆಗೆ ಸಿದ್ಧತೆ ನಡೆಯುತ್ತಿದೆ. ನಗರಸಭೆ ವ್ಯಾಪ್ತಿಗೆ ಅಗತ್ಯವಿರುವ 9 ಎಂ.ಎಲ್.ಡಿ.ಗಿಂತಲೂ ಹೆಚ್ಚು ನೀರಿನ ಪೂರೈಕೆ ಯೋಜನೆಯಡಿ ನಡೆಯಲಿದೆ. ಹಾಗಾಗಿ, ಈ ಹಿಂದೆ ಬೇಸಿಗೆಯಲ್ಲಿ ಬಳಕೆಯಾಗುತ್ತಿದ್ದ ನಗರಸಭೆಯ 177 ಬೋರ್ ವೆಲ್ ಗಳನ್ನು ಹಂತ ಹಂತವಾಗಿ ಮಳೆಕೊಯ್ಲಿಗೆ ಬಳಸಿಕೊಳ್ಳುವ ಯೋಜನೆ ನಮ್ಮ ಮುಂದಿದೆ. ಈಗಾಗಲೇ 5 ಬೋರ್ ವೆಲ್ ಗಳನ್ನು ಮಳೆಕೊಯ್ಲಿಗೆ ಒಳಪಡಿಸಿದ್ದೇವೆ.
– ಮಧು ಎಸ್. ಮನೋಹರ್, ಪೌರಾಯುಕ್ತ, ಪುತ್ತೂರು ನಗರಸಭೆ
15ನೇ ಹಣಕಾಸು ಯೋಜನೆಯಡಿ ಅನುದಾನ:
15ನೇ ಹಣಕಾಸು ಯೋಜನೆಯಡಿ ನಗರಸಭೆಗೆ ಬರುವ ಅನುದಾನದಲ್ಲಿ ಶೇ. 60ನ್ನು ಘನತ್ಯಾಜ್ಯ ಹಾಗೂ ಕುಡಿಯುವ ನೀರಿಗೆ ಮೀಸಲಿಡಲಾಗುತ್ತದೆ. ಶೇ. 60ರ ಅರ್ಧದಷ್ಟನ್ನು ಕುಡಿಯುವ ನೀರಿಗಾಗಿ ಬಳಕೆ ಮಾಡಲಾಗುತ್ತದೆ. ಇದರಲ್ಲಿ 15 ಲಕ್ಷ ರೂ.ನಲ್ಲಿ ಬೋರ್ ವೆಲ್ ಗಳನ್ನು ಮಳೆಕೊಯ್ಲು ಮಾಡಲಾಗುವುದು.
– ದುರ್ಗಾ ಪ್ರಸಾದ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಪುತ್ತೂರು ನಗರಸಭೆ