ಕಡಬ: ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ‘ಕ್ರೀಡಾ ಸಂಭ್ರಮ-2023-24’ ಆಲಂಕಾರು ಶ್ರೀ ದುರ್ಗಾಂಬಾ ಮೈದಾನದಲ್ಲಿ ಜ.7 ರಂದು ನಡೆಯಿತು.
ನಿವೃತ್ತ ಅಧ್ಯಾಪಕ ಗುಮ್ಮಣ್ಣ ಗೌಡ ಧ್ವಜಾರೋಹಣ ನೆರವೇರಿಸಿ, ಮಾತನಾಡಿ, ಬಾವುಟ ಅತ್ಯಂತ ಹೆಮ್ಮೆಯ ವಿಷಯವಾಗಿದ್ದು, ಒಗ್ಗಟ್ಟಿನ, ವಿಜೇತದ, ಸ್ಪರ್ಧೆಯ, ದೇಶದ ಸಂಕೇತವಾಗಿದೆ. ಈ ನಿಟ್ಟಿನಲ್ಲಿ ಒಗ್ಗಟ್ಟಿನಲ್ಲಿ, ಸೌಹಾರ್ದದ ಸ್ಪರ್ಧೆಯಲ್ಲಿ ನಾವೆಲ್ಲರೂ ಸಂಭ್ರಮಿಸೋಣ ಎಂದು ಹೇಳಿದರು.
ಶಾಸಕ ಸಂಜೀವ ಮಠಂದೂರು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ದೈಹಿಕ ಜತೆಗೆ ಮಾನಸಿಕವಾಗಿ ಕ್ರೀಡೆ ಸಹಕಾರಿಯಾಗಿದೆ. ಸೌಹಾರ್ದ ವಾತಾವರಣ ನಿರ್ಮಾಣ ಮಾಡಲೂ ಕ್ರೀಡೆಯಿಂದ ಸಾಧ್ಯ. ಈ ನಿಟ್ಟಿನಲ್ಲಿ ಇಂದು ನಡೆಯುತ್ತಿರುವ ಕ್ರೀಡಾಕೂಟ ಪರಸ್ಪರ ಸೌಹಾರ್ದದ ಬಾಳ್ವೆ ನಡೆಸಲು ಸಹಕಾರಿಯಾಗಲಿ ಎಂದರು.
ಮುಖ್ಯ ಅತಿಥಿಯಾಗಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕಿ ತೇಜಸ್ವಿನಿ ಶೇಖರ ಗೌಡ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಪುತ್ತೂರು ಎ.ವಿ.ಜಿ.ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಎ.ವಿ.ನಾರಾಯಣ, ನೋಟರಿ ನ್ಯಾಯವಾದಿ ಸುಂದರ ಗೌಡ ನೆಕ್ಕಿಲಾಡಿ, ವಿಜಯಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಬಾಲಕೃಷ್ಣ ಕತ್ಲಡ್ಕ ಪಾಲ್ಗೊಂಡು ಶುಭ ಹಾರೈಸಿದರು.
ಆರಂಭದಲ್ಲಿ ಹಳೆ ನೇರೆಂಕಿ ಗ್ರಾಮದ ಕ್ರೀಡಾಪಟುಗಳ ಬ್ಯಾಂಡ್ ಸೆಟ್‍ನೊಂದಿಗೆ ಕುಂತೂರು, ಪೆರಾಬೆ, ಕೊಯಿಲ, ರಾಮಕುಂಜ ಹಾಗೂ ಆಲಂಕಾರು ಗ್ರಾಮದ ಕ್ರೀಡಾಪಟುಗಳು ಆಕರ್ಷಕ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಲಿಂಗಪ್ಪ ಗೌಡ ಕಡೆಂಬ್ಯಾಳ್, ನಾಗಪ್ಪ ಗೌಡ ಮರುವಂತಿಲ, ಈಶ್ವರ ಗೌಡ ಪಜ್ಜಡ್ಕ, ಪದ್ಮಪ್ಪ ಗೌಡ ರಾಮಕುಂಜ, ಮಹಾಬಲ ಕಕ್ವೆ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹರಿಶ್ಚಂದ್ರ ಕೋಡ್ಲ ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾಕೂಟದಲ್ಲಿ 6 ವರ್ಷದ ಕೆಳಗಿನ ಅಂಗನವಾಡಿ ಪುಟಾಣಿಗಳಿಗೆ ಕಪ್ಪೆ ಜಿಗಿತ, ಕಲರ್ ಬಾಕ್ಸ್ ಹೆಕ್ಕುವುದು, 1 ರಿಂದ 4 ನೇ ತರಗತಿ ಮಕ್ಕಳಿಗೆ 100 ಮೀ. ಓಟ, ಬಕೆಟ್ ಗೆ ಬಾಲ್ ಹಾಕುವುದು, 5 ರಿಂದ 7ನೇ ತರಗತಿ ಮಕ್ಕಳಿಗೆ 200 ಮೀ. ಓಟ, ಶಟಲ್ ರಿಲೆ, 8 ರಿಂದ 10ನೇ ತರಗತಿ ಮಕ್ಕಳಿಗೆ 100 ಮೀ., 200 ಮೀ. ಓಟದ ಸ್ಪರ್ಧೆಗಳು ನಡೆಯಿತು. ಮಹಿಳೆಯರಿಗೆ ಹಗ್ಗಜಗ್ಗಾಟ, ತ್ರೋಬಾಲ್, ಕಬಡ್ಡಿ, ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿ ಪಂದ್ಯಾ ನಡೆಯಿತು. 45 ರಿಂದ 60 ವರ್ಷದ ಪುರುಷರು ಹಾಗೂ ಮಹಿಳೆಯರಿಗೆ ವೇಗದ ನಡಿಗೆ, ಗುಂಡೆಸೆತ, 60 ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರಿಗೆ ವೇಗದ ನಡಿಗೆ, ಗುಂಡೆಸೆತ ಸ್ಪರ್ಧೆಗಳು ನಡೆಯುತ್ತಿವೆ.