ಬೆಂಗಳೂರು: ನಗರದಾದ್ಯಂತ ಇರುವ ಕನ್ನಡ ನಾಮಫಲಕಗಳ ಸ್ಥಿತಿಗತಿ ಕುರಿತು ಜನವರಿ 15 ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುರುವಾರ ಸೂಚನೆ ನೀಡಿದೆ.
ನಗರದ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಅಳವಡಿಸುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿರುವ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು ಹಾಗೂ ಎಲ್ಲಾ ವಲಯದ ಉದ್ದಿಮೆಗಳನ್ನು ಜನವರಿ 15ರ ಒಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಬೇಕು. ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ತಿಳುವಳಿಕೆ ಪತ್ರ ನೀಡಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಕನ್ನಡ ಭಾಷೆಯನ್ನು ಬಳಸದ ಉದ್ದಿಮೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಮೀಕ್ಷೆ ನಡೆಸುವಾಗ ನಾಮಪಲಕದಲ್ಲಿ ಕನ್ನಡ ಬಳಕೆ ಮಾಡದಿದ್ದಲ್ಲಿ ಆಯಾ ಉದ್ದಿಮೆಗಳಿಗೆ ತಿಳುವಳಿಕೆ ಪತ್ರ ನೀಡಬೇಕು. ಉದ್ದಿಮೆ ಪರವಾನಗಿ ಇದ್ದರೆ ಯಾಕೇ ನಾವು ಉದ್ದಿಮೆ ಪರವಾನಗಿ ರದ್ದು ಮಾಡಬಾರದು ಎಂದು ನೀಡಬೇಕು. ಒಂದು ವೇಳೆ ಉದ್ದಿಮೆ ಪರವಾನಗಿ ಮಾಡಿಸದ್ದಿದರೆ ಯಾಕೆ ನಾವು ನಿಮ್ಮ ಉದ್ಯಮವನ್ನು ಮುಚ್ಚಬಾರದೆಂದು ತಿಳುವಳಿಕೆ ಪತ್ರವನ್ನು ಜಾರಿಮಾಡಬೇಕೆಂದು ತಿಳಿಸಿದರು. ಸಭೆಯಲ್ಲಿ ವಲಯ ಆಯುಕ್ತ ಇಬ್ರಾಹಿಂ ಮೈಗುರ್, ಪ್ರೀತಿ ಗೆಹ್ಲೋಟ್, ಎಲ್ಲಾ ವಲಯದ ಜಂಟಿ ಆಯುಕ್ತರು, ಉಪ ಆಯುಕ್ತರು (ಆಡಳಿತ), ಜಾಹೀರಾತು ವಿಭಾಗದ ಉಪ ಆಯುಕ್ತರು, ಮುಖ್ಯ ಆರೋಗ್ಯಾಧಿಕಾರಿ, ವಲಯ ಆರೋಗ್ಯಾಧಿಕಾರಿಗಳು ಸೇರಿದಂತೆ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.