ಹಿಂಡನ್ ಬರ್ಗ್ ವರದಿ ಕುರಿತಂತೆ ಕೋರ್ಟ್ ನ ಮಹತ್ವದ ಆದೇಶ ಹೊರಬಿದ್ದ ಬೆನ್ನಲ್ಲೇ ಇದೀಗ ಮತ್ತೆ ಗೌತಮ್ ಅದಾನಿ ಭಾರತದ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಅದಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಭಾರತದ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನಲ್ಲಿ ಹೊರಹೊಮ್ಮಿದ್ದಾರೆ.
ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿ ಅದಾನಿ ಇದ್ದು, ರಿಲಯನ್ಸ್ ಸಮೂಹದ ಮುಖ್ಯಸ್ಥ ಅಂಬಾನಿ 13ನೇ ಸ್ಥಾನದಲ್ಲಿದ್ದಾರೆ. ವರದಿಯಲ್ಲಿರುವಂತೆ ಅದಾನಿ ಒಟ್ಟು 97.6 ಬಿಲಿಯನ್ ಅಮೆರಿಕನ್ ಡಾಲರ್ ಸಂಪತ್ತಿನ ಒಡೆಯರಾಗಿದ್ದಾರೆ. ಅತ್ತ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು ಅವರು ಒಟ್ಟು ಸಂಪತ್ತಿನ ಮೌಲ್ಯ 97 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ ಎಂದು ಹೇಳಲಾಗಿದೆ.
ಅದಾನಿ ಸಂಸ್ಥೆಗಳು ಅವ್ಯವಹಾರ ನಡೆಸಿವೆ ಎಂಬ ಹಿಂಡೆನ್ಬರ್ಗ್ ವರದಿಯನ್ನಾಧರಿಸಿ ಸಂಸ್ಥೆಯ ವಿರುದ್ಧ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದ ನಂತರ ಅದಾನಿ ಷೇರುಗಳ ಬೆಲೆ ಏರಿಕೆ ಕಂಡಿತ್ತು. ಇದಕ್ಕಿಂತ ಒಂದು ದಿನ ಹಿಂದೆ ಅದಾನಿ ಸಂಪತ್ತು ಮೌಲ್ಯ ರೂ. 8.98 ಲಕ್ಷ ಕೋಟಿ ಇದ್ದರೆ ಒಂದೇ ದಿನದಲ್ಲಿ ಅದು ರೂ. 9.37 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.