ಪುತ್ತೂರು: ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ವಿರುದ್ಧ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಠಾಣೆಗೆ ದೂರು ನೀಡಿದ್ದಾರೆ.
ಅವಧಿ ಮುಗಿದ ಬಾಡಿಗೆ ಕಟ್ಟಡಕ್ಕೆ ಏಲಂ ಪ್ರಕಟಣೆ ಅಂಟಿಸಿದ ನೋಟೀಸನ್ನು ಕಿತ್ತು ಹಾಕಿ, ಅಂಗಡಿ ಕೋಣೆ ಮೇಲೆ ಅಕ್ರಮ ಹಕ್ಕು ಸಾಧಿಸಿದ್ದಲ್ಲದೆ ತಾಲೂಕು ಪಂಚಾಯತ್ ಕಚೇರಿಗೆ ನುಗ್ಗಿ ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪುತ್ತೂರು ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪುತ್ತೂರು ತಾಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣ-2 ರ ಕೊಠಡಿ ಸಂಖ್ಯೆ 3ನ್ನು ಬಪ್ಪಳಿಗೆ ನಿವಾಸಿ ಹೇಮಲತಾ ಎಂಬವರಿಗೆ ಬಾಡಿಗೆಗೆ ನೀಡಲಾಗಿತ್ತು. ಇವರು ದೀರ್ಘಕಾಲ ಬಾಡಿಗೆ ಬಾಕಿ ಇರಿಸಿಕೊಂಡ ಹಿನ್ನೆಲೆಯಲ್ಲಿ ನಿಯಮಾನುಸಾರ ಕೊಠಡಿಗೆ ಬೀಗ ಮುದ್ರೆ ಹಾಕಿ ಮರು ಏಲಂ ಪ್ರಕಟಣೆಯನ್ನು ಪ್ರಚಾರ ಪಡಿಸಲಾಗಿತ್ತು. ಪ್ರಕಟಣೆಯ ಪ್ರತಿಯನ್ನು ಕೊಠಡಿಯ ಬಾಗಿಲಿಗೆ ಅಂಟಿಸಲಾಗಿತ್ತು. ಕೊಠಡಿಯ ಬಾಡಿಗೆದಾರರಾದ ಹೇಮಲತಾ ಅವರ ಗಂಡ ರಾಜ ಎಂಬವರು ಮಂಗಳವಾರ ಮಧ್ಯಾಹ್ನ ಕಚೇರಿಯ ಏಲಂ ಪ್ರಕಟಣೆಯ ನೊಟೀಸನ್ನು ಕಿತ್ತು ತೆಗೆದು ತಾಲೂಕು ಪಂಚಾಯಿತಿ ಕಚೇರಿಗೆ ಅಕ್ರಮ ಪ್ರವೇಶಿಸಿ ಉದ್ದಟತನದಿಂದ ವರ್ತಿಸಿದ್ದಾರೆ. ಬಾಡಿಗೆ ಪಡೆದ ಕೊಠಡಿಯು ತನ್ನದೆಂದು ಗದರಿಸಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ನವೀನ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.
ಪುತ್ತೂರು ನಗರ ಪೊಲೀಸ ಠಾಣೆಯಲ್ಲಿ 353 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.