ಮಾಸ್ಕೋ: ಉಕ್ರೇನ್ ಗಡಿ ಸಮೀಪದಲ್ಲಿರುವ ತನ್ನದೇ ಪ್ರಾಂತವಾದ ದಕ್ಷಿಣ ವೊರೊನೆಝ್ನ ಗ್ರಾಮವೊಂದರ ಮೇಲೆ ರಶ್ಯ ವಾಯುಪಡೆ ಮಂಗಳವಾರ ಪ್ರಮಾದವಶಾತ್ ಬಾಂಬ್ ದಾಳಿ ನಡೆಸಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲವೆಂದು ವರದಿಯಾಗಿದೆ.
ಬಾಂಬ್ ದಾಳಿಗೆ ಗುರಿಯಾದ ಪೆಟ್ರೊಪವ್ಲೋವ್ಕಾ ಗ್ರಾಮವು ಉಕ್ರೇನ್ ಗಡಿಯಿಂದ 93 ಮೈಲು ಪೂರ್ವದಲ್ಲಿದೆ. ಆಕಸ್ಮಿಕ ಬಾಂಬ್ ಎಸೆತದಿಂದಾಗಿ ಆರು ಮನೆಗಳಿಗೆ ಹಾನಿಯಾಗಿವೆಯೆಂದು ರಶ್ಯನ್ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
‘‘ಈ ಘಟನೆಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಯುತ್ತಿದೆ. ಹಾನಿಯ ರೀತಿಯನ್ನು ಅಂದಾಜಿಸಲು ಆಯೋಗವೊಂದು ಕೆಲಸ ಮಾಡುತ್ತಿದೆ. ಮನೆಗಳನ್ನು ಸರಿಪಡಿಸಲು ಆರ್ಥಿಕ ನೆರವನ್ನು ಒದಗಿಸಲಾಗುವುದು’’ ಎಂದು ರಶ್ಯ ಸೇನೆಯ ಹೇಳಿಕೆಯು ತಿಳಿಸಿದೆ.