ಉಪ್ಪಿನಂಗಡಿ: ವಿಷ ಸೇವಿಸಿ ಅಸ್ವಸ್ಥರಾದ ಗೃಹಿಣಿಯೋರ್ವರನ್ನು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿಗೆ ಕರೆದೊಯ್ಯುವ ಸಂದರ್ಭ ಮಹಿಳೆಯ ದೇಹದೊಳಗಿನ ವಿಷ ಹೊರ ತೆಗೆಯುವ ಮೂಲಕ 108 ಅಂಬುಲೆನ್ಸ್ನ ಸಿಬ್ಬಂದಿ ತೋರಿದ ಸಮಯ ಪ್ರಜ್ಞೆ ಮೆರೆದ ಘಟನೆ ನಡೆದಿದೆ.
ಉಪ್ಪಿನಂಗಡಿಯ ಮಠ ಪರಿಸರದ ಮಹಿಳೆಯೋರ್ವರು ವಿಷ ಸೇವಿಸಿ ಅಸ್ವಸ್ಥರಾದ ಸ್ಥಿತಿಯಲ್ಲಿ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ಕರೆ ತರಲಾಗಿತ್ತು. ಗಂಭೀರ ಸ್ಥಿತಿಗೆ ತಲುಪಿದ್ದ ಮಹಿಳೆಯನ್ನು ಅಗತ್ಯ ಚಿಕಿತ್ಸೆಯೊಂದಿಗೆ ಮಂಗಳೂರಿಗೆ ಕರೆದೊಯ್ಯುವ ಅನಿವಾರ್ಯತೆ ಎದುರಾಗಿತ್ತು.
ಈ ವೇಳೆ ಸ್ಥಳೀಯ ಟೀಮ್ ದಕ್ಷಿಣ ಕಾಶಿ ಅಂಬುಲೆನ್ಸ್ ಅನ್ನು ಸೈರನ್ ಸೇವೆಗಾಗಿ ಬಳಸಿಕೊಂಡು ಅಸ್ವಸ್ಥ ಮಹಿಳೆಯನ್ನು 108 ಅಂಬುಲೆನ್ಸ್ ನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಆಂಬುಲೆನ್ಸ್ ಸಿಬ್ಬಂದಿ ಅವಿನಾಶ್ ಎಚ್. ಮಹಿಳೆಯ ದೇಹದೊಳಗಿನ ವಿಷ ಪೂರ್ಣ ಪ್ರಮಾಣದಲ್ಲಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿ ಮಹಿಳೆಯ ಮುಂದಿನ ಚಿಕಿತ್ಸೆಗೆ ಸ್ಪಂದಿಸುವಂತೆ ಮಾಡಿ ಅಪಾಯದಿಂದ ಪಾರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.