ಸುಬ್ರಹ್ಮಣ್ಯ: ಭಕ್ತರೊಬ್ಬರ ಪರ್ಸ್ ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದ ಮಹಿಳೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭದ್ರತಾ ಸಿಬ್ಬಂದಿ ಗಂಗಾಧರ ನಾಡೋಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ದೂರದ ಊರಿನಿಂದ ಆಗಮಿಸಿದ ಭಕ್ತರೊಬ್ಬರ ಮೊಬೈಲ್ ಹಾಗೂ ಪರ್ಸ್ ಕಳೆದು ಹೋಗಿರುವ ಬಗ್ಗೆ ದೇವಸ್ಥಾನದ ಕಚೇರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಎಲ್ಲಾ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುವಾಗ ಮಹಿಳೆಯೊಬ್ಬಳು ಪರ್ಸ್ ಕಳ್ಳತನ ಮಾಡುತ್ತಿರುವ ದೃಶ್ಯ ಕಂಡುಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಗಂಗಾಧರ ನಾಡೋಳಿ ಅವರು, ಕಳ್ಳತನ ನಡೆಸಿದವರ ಪತ್ತೆಗೆ ಮುಂದಾದರು.
ಅಷ್ಟರಲ್ಲಿ ಕಳ್ಳತನ ನಡೆಸಿದ್ದ ಮಹಿಳೆ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಬಸ್ ಏರಿದ್ದಳು. ಆಕೆಯನ್ನು ಹಿಡಿದು, ಪೊಲೀಸರ ವಶಕ್ಕೆ ನೀಡಲಾಯಿತು ಎಂದು ವರದಿಯಾಗಿದೆ.
ಅಗತ್ಯ ದಾಖಲೆಗಳಿದ್ದ ಪರ್ಸ್ ಮರಳಿ ಸಿಕ್ಕಿದ್ದು, ಗಂಗಾಧರ ನಾಡೋಳಿ ಅವರ ಸಮಯಪ್ರಜ್ಞೆಗೆ ಭಕ್ತರು ಅಭಿನಂದನೆ ಸಲ್ಲಿಸಿದರು.