ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ (55) ಸಾವನ್ನಪ್ಪಿದ್ದಾನೆ. ಮಂಗಳವಾರ ಬೆಳಗ್ಗೆ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಬಾಂಬ್ ದಾಳಿಯಲ್ಲಿ ಮಸೂದ್ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತವಾದ ಮಾಹಿತಿ ಕೂಡ ಲಭ್ಯವಾಗಿಲ್ಲ.
ಮೊಹಮ್ಮದ್ ಮಸೂದ್ ಅಜರ್ ಅಲ್ವಿ, ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಸ್ಥಾಪಕ. ಸೋಮವಾರ ಬೆಳಗ್ಗೆ ಭಾವಲ್‌ಪುರ ಮಸೀದಿಯಿಂದ ವಾಪಸಾಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಆತನ ಮೇಲೆ ಬಾಂಬ್ ಎಸೆದಿದ್ದಾರೆ ಎಂದು ವರದಿಯಾಗಿದೆ. ಮಸೂದ್ ಅಜರ್ ಸಾವಿನ ಕುರಿತು ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ ಖಾಸಗಿ ವಾಹಿನಿ ಈ ಕುರಿತಾಗಿ ಕೆಲವು ಫೋಟೋಗಳನ್ನು ಶೇರ್ ಮಾಡಿ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದೆ. ಆದರೆ ಈ ಕುರಿತಾಗಿ ಅಧಿಕೃತ ಮಾಹಿತಿ ಹೊರ ಬರಬೇಕಿದೆ.
ಪಾಕಿಸ್ತಾನದಲ್ಲಿ ಕೆಲವು ದಿನಗಳಿಂದ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ಮುಖಂಡರು ನಿಗೂಢ ಸಂದರ್ಭಗಳಲ್ಲಿ ಸಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.
2001ರ ಭಾರತೀಯ ಸಂಸತ್ತಿನ ಮೇಲಿನ ದಾಳಿ, 2008ರ ಮುಂಬೈ ದಾಳಿ, 2016ರ ಪಠಾಣ್ ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿಗಳಿಗೆ ಕಾರಣವಾದ ಜೈಶ್-ಎ-ಮೊಹಮ್ಮದ್ ಅನ್ನು ಅಜರ್ ಸ್ಥಾಪಿಸಿದ್ದ.
ಪಾಕಿಸ್ತಾನದ ಪಂಜಾಬ್ ರಾಜ್ಯದಲ್ಲಿ ವಿದ್ಯಾವಂತ ಕುಟುಂಬದಲ್ಲಿ ಜನಿಸಿದ ಅಜರ್ ಕಾಶ್ಮೀರದ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿದ್ದನು. ಜಿಹಾದಿಯನ್ನು ಬ್ರಿಟನ್‌ಗೆ ಪರಿಚಯಿಸಿದವನು ಈತ. ಭಾರತವು ಅವನನ್ನು ಬಂಧಿಸಿದರೆ, ಬಿಡುಗಡೆಯ ಬೇಡಿಕೆಯೊಂದಿಗೆ ವಿಮಾನವನ್ನು ಹೈಜಾಕ್ ಮಾಡಿಸಿದ್ದ. ಜೈಲಿನಲ್ಲಿದ್ದಾಗ ಅಮೆರಿಕದ ತನಿಖಾ ಸಂಸ್ಥೆಗಳು, ಇಂಟರ್‌ಪೋಲ್ ಕೂಡ ಈ ಹಿಂದೆ ಆತನನ್ನು ವಿಚಾರಣೆ ನಡೆಸಿದ್ದವು. ಮೇ 1, 2019ರಂದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅವನನ್ನು ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿತು.