ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೈತೈ ಮತ್ತು ಕುಕಿ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ ಮೈತೈ ಸಮುದಾಯದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ಇಂಫಾಲ್ ಪಶ್ಚಿಮದ ನಿವಾಸಿ ನಿಂಗೋಮ್ಬಾಮ್ ಜೇಮ್ಸ್ (32) ಗುಂಡೇಟಿಗೆ ಬಲಿಯಾದ ವ್ಯಕ್ತಿ.
ಮಣಿಪುರ ಗಡಿಭಾಗದ ಮೊರೆಹ್ ಪಟ್ಟಣದಲ್ಲಿ ಪೊಲೀಸ್ ಕಮಾಂಡೋಗಳು ಮತ್ತು ಸಶಸ್ತ್ರದಾರಿ ಗುಂಪಿನ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಪೇದೆ ಗಾಯಗೊಂಡಿದ್ದಾರೆ.
ಘರ್ಷಣೆ ವೇಳೆ ಗಾಯಗೊಂಡಿದ್ದ ನಿಂಗೋಂಬಮ್ ಜೇಮ್ಸ್‌ನ್ನು ಇಂಫಾಲ್‌ನ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಡಿ.4ರಂದು ತೆಂಗೊಪಾಲ್ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ 13 ಮಂದಿ ಹತ್ಯೆಯಾದ 26 ದಿನಗಳ ಬಳಿಕ ಈ ಘಟನೆ ವರದಿಯಾಗಿದೆ. ಮಣಿಪುರದ ಲೀತು ಗ್ರಾಮದಲ್ಲಿ ಡಿ.4ರಂದು ಗುಂಡಿನ ಚಕಮಕಿ ನಡೆದಿದ್ದು, 3 ಜನರು ಮೃತಪಟ್ಟಿದ್ದರು.
ಶನಿವಾರ ಬೆಳಗಿನ ಜಾವ 3:30ರ ಸುಮಾರಿಗೆ ಕುಕಿ ಮತ್ತು ಮೈತೈ ಸಮುದಾಯದ ಜನರ ಗುಂಪಿನ ನಡುವೆ ಕಾಂಗ್‌ಚುಪ್ ಪೊಲೀಸ್ ಠಾಣೆ ವ್ಯಾಪ್ತಿಯ ನಖುಜಾಂಗ್ ಮತ್ತು ಸಿಂಗ್ಡಾ ಕುಕಿ ಗ್ರಾಮಗಳಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.
ನಡೆಸಿದ ದಾಳಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು, ಅಸ್ಸಾಂ ರೈಫಲ್ಸ್‌ನ ಶಿಬಿರದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಲ್ಲದೆ ಮೋರೆ ಪಟ್ಟಣದಲ್ಲಿ ಎರಡು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
ಮೇ ತಿಂಗಳ ಆರಂಭದಿಂದ ಮಣಿಪುರದಲ್ಲಿ ಜನಾಂಗೀಯ ಕಲಹ ನಡೆಯುತ್ತಿದ್ದು, ರಾಜ್ಯದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮೈತೈ ಹಾಗೂ ಕುಕಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇದುವರೆಗೆ ಹಿಂಸಾಚಾರಕ್ಕೆ 197 ಮಂದಿ ಬಲಿಯಾಗಿದ್ದು, ಎರಡೂ ಸಮುದಾಯಗಳಿಗೆ ಸೇರಿದ 60 ಸಾವಿರಕ್ಕೂ ಹೆಚ್ಚು ನಾಗರಿಕರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.