ಪುತ್ತೂರು: ಪುತ್ತೂರು-ಕಡಬ-ಸುಳ್ಯ ಈ ಮೂರು ತಾಲೂಕಿನ ಕೊಂಡಿಯಾಗಿರುವ ತೀರಾ ಕುಗ್ರಾಮದಲ್ಲಿರುವ ಬಲೆರಾವು ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಇದೀಗ ಹಲಗೆ ಜೋಡಣೆ ಕಾಮಗಾರಿ ಆರಂಭಗೊಂಡಿದೆ.
ಹಿಂದಿನ ಬಾರಿ ಶಾಸಕರಾಗಿದ್ದ ಸಂಜೀವ ಮಠಂದೂರು ಅವರ ಮುಂದೆ ಕಿಂಡಿ ಅಣೆಕಟ್ಟಿನ ಪ್ರಸ್ತಾಪ ಇಡಲಾಯಿತು. ಕಿಂಡಿ ಅಣೆಕಟ್ಟಿನ ಅನಿವಾರ್ಯತೆಯನ್ನು ಶಾಸಕರಿಗೆ ತಿಳಿಸಿದಾಗ, ಈ ಪ್ರದೇಶಕ್ಕೊಂದು ರಸ್ತೆ, ಸೇತುವೆ ನಿರ್ಮಿಸಿದರೆ ಬಲೆರಾವು ಪ್ರದೇಶದ ಚಿತ್ರಣವೇ ಬದಲಾದೀತು ಎಂಬ ದೂರದೃಷ್ಟಿಯ ಚಿಂತನೆ ಶಾಸಕರಿಗೆ ಹೊಳೆಯಿತು. ಅಷ್ಟೇ, ಸೇತುವೆ ಸಹಿತ ಕಿಂಡಿಅಣೆಕಟ್ಟನ್ನು ಮಂಜೂರು ಮಾಡಿಯೇ ಬಿಟ್ಟರು. ಇದಕ್ಕಾಗಿ ಸಣ್ಣನೀರಾವರಿ ಇಲಾಖೆಯ ವಿಶೇಷ ಅನುದಾನದಿಂದ 3 ಕೋಟಿ ರೂ. ಮಂಜೂರು ಮಾಡಿದ್ದರು. ಇದರಲ್ಲಿ ಸೇತುವೆ ಹಾಗೂ ಕಿಂಡಿಅಣೆಕಟ್ಟು ನಿರ್ಮಾಣಗೊಂಡಿದೆ. 1.20 ಕೋಟಿ ರೂ ಅನುದಾನದಲ್ಲಿ ರಸ್ತೆ ಕಾಮಗಾರಿಯೂ ನಡೆದಿದೆ.
ತೀರಾ ಕುಗ್ರಾಮವಾಗಿದ್ದ ಬಲೆರಾವು, ಆಧುನಿಕ ಜಗತ್ತಿಗೆ ತೆರೆದುಕೊಳ್ಳತೊಡಗಿದೆ. ಮುಂದೊಂದು ದಿನ ಇದು ತಾಲೂಕಿನ ಪ್ರಮುಖ ಪ್ರದೇಶವಾಗಿ ಬೆಳೆದರೂ ಅಚ್ಚರಿಪಡಬೇಕಾಗಿಲ್ಲ. ಇದಕ್ಕೆಲ್ಲಾ ಕಾರಣ, ಒಂದು ರಸ್ತೆ ಹಾಗೂ ಒಂದು ಸೇತುವೆ ಸಹಿತ ಕಿಂಡಿಅಣೆಕಟ್ಟು.
100 ಮೀಟರ್ ದೂರದಲ್ಲಿ ಕುಮಾರಧಾರ ನದಿ ವಿಸ್ತಾರವಾಗಿ ಹರಡಿದ್ದು, ಇದಕ್ಕೆ ಸೇರುವ ಗೌರಿ ಹೊಳೆ ಇದೇ ಬಲೆರಾವು ಪ್ರದೇಶವನ್ನು ಸೀಳಿಕೊಂಡು ಮುಂದಡಿ ಇಡುತ್ತದೆ. ಈ ಹೊಳೆಗೆ ಕಿಂಡಿಅಣೆಕಟ್ಟು ಕಟ್ಟಬೇಕು ಎಂಬ ಪ್ರಸ್ತಾಪವೇ, ಇಂದು ಇಡೀಯ ಪ್ರದೇಶದ ಚಿತ್ರಣವನ್ನು ಬದಲಿಸುವಂತೆ ಮಾಡಿದೆ.
ಪುತ್ತೂರು, ಕಡಬ ಹಾಗೂ ಸುಳ್ಯ ಈ ಮೂರು ತಾಲೂಕುಗಳ ಕೊಂಡಿ ಬಲೆರಾವು ಸೇತುವೆ. ಸೇತುವೆಯ ಈ ಭಾಗ ಪುತ್ತೂರು. ಇನ್ನೊಂದು ಬದಿ ಕಡಬ. ಅಂದರೆ ಸುಳ್ಯ ವಿಧಾನಸಭಾ ಕ್ಷೇತ್ರ. ಈ ಮೂರು ತಾಲೂಕುಗಳ ಕೊಂಡಿಯಾಗಿ ಸೇತುವೆ ಸಹಿತ ಕಿಂಡಿಅಣೆಕಟ್ಟು ಕೆಲಸ ಮಾಡಲಿದೆ. ಆದ್ದರಿಂದ ಸೇತುವೆಗೆ ಸಂಪರ್ಕ ರಸ್ತೆಗಾಗಿ ಸಚಿವ, ಶಾಸಕ ಎಸ್. ಅಂಗಾರ ಅವರು ಅನುದಾನ ಇಟ್ಟಿದ್ದು, ಕಾಮಗಾರಿ ನಡೆಯಲಿದೆ.
ಇದೀಗ ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಣೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಭರದಿಂದ ಸಾಗುತ್ತಿದೆ.