ಮಂಗಳೂರು: ಒಂದೆಡೆ ಕೋವಿಡ್ ತಪಾಸಣೆ ಹೆಚ್ಚುತ್ತಿದ್ದಂತೆ ಇನ್ನೊಂದೆಡೆ ಪಾಸಿಟಿವ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
ಜಿಲ್ಲೆಯಲ್ಲಿ ಗುರುವಾರ ಒಟ್ಟು 341 ಮಂದಿಯನ್ನು ತಪಾಸಣೆಗೆ ಒಳಪಡಿಸಿದ್ದು, 8 ಮಂದಿಗೆ ಕೋವಿಡ್ ದೃಢ ಪಟ್ಟಿದೆ. ಇದರಲ್ಲಿ ಮಂಗಳೂರಿನ ನಾಲ್ವರು, ಬಂಟ್ವಾಳದ ಮೂವರು ಮತ್ತು ಬೆಳ್ತಂಗಡಿ ಮೂಲದ ಒಬ್ಬರಿದ್ದಾರೆ. ಒಬ್ಬರು ಐಸಿಯುನಲ್ಲಿ, 6 ಮಂದಿ ಗೃಹ ನಿಗಾವಣೆಯಲ್ಲಿ ಮತ್ತು ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವು ದಿನಗಳಿಂದ ಜಿಲ್ಲೆಯಲ್ಲಿ ರಾಜ್ಯ ಸರಕಾರ ನೀಡಿದ ಗುರಿಯಂತೆ ಪರೀಕ್ಷೆಗಳು ನಡೆಯುತ್ತಿವೆ. ಡಿ. 26 ರಂದು 392, ಡಿ.27ರಂದು 335 ಮತ್ತು ಡಿ.28ರಂದು 341 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಕೇರಳದಲ್ಲಿ ಕೋವಿಡ್ ರೂಪಾಂತರಿ ಜೆಎನ್.1 ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ವಿಶೇಷ ನಿಗಾ ಇರಿಸಲಾಗಿದೆ.
ಕೇರಳ ವಿದ್ಯಾರ್ಥಿಗಳ ಮೇಲೆ ನಿಗಾ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಕೇರಳ ಮೂಲಕ ವಿದ್ಯಾರ್ಥಿಗಳು ಕ್ರಿಸ್ಮಸ್ ಹಬ್ಬಕ್ಕೆ ತಮ್ಮ ಊರುಗಳಿಗೆ ತೆರಳಿ ಮತ್ತೆ ಜಿಲ್ಲೆಗೆ ಮರಳುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಲಾಗಿದೆ.
ಈಗಾಗಲೇ ವಿವಿಧ ಇಲಾಖೆಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆರೋಗ್ಯ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳಲ್ಲಿ ಕೋವಿಡ್ ಲಕ್ಷಣ, ಐಎಲ್‌ಐ ಲಕ್ಷಣ ಕಂಡುಬಂದರೆ ಅವರನ್ನು ಪ್ರತ್ಯೇಕಿಸಿ, ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು ಮತ್ತು ಕೋವಿಡ್ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಲಾಗಿದೆ. ಈಗಾಗಲೇ ಜಿ.ಪಂ. సిఇఒ ಅವರ ಅಧ್ಯಕ್ಷತೆಯಲ್ಲಿ ವೈದ್ಯಕೀಯ ವಿದ್ಯಾಲಯಗಳ ಪ್ರಮುಖರ ಸಭೆ ನಡೆಸಿದ್ದು, ಅಲ್ಲಿಯೂ ನಿರ್ದೇಶನ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.