ಪುತ್ತೂರು: ಯುವ ಜನತೆಗೆ ಸಾಹಿತ್ಯ ಪರಿಷತ್ ಜವಾಬ್ದಾರಿ ನೀಡಿರುವ ಕಾರಣ ಅದಕ್ಕೊಂದು ಹೊಸ ಆಯಾಮವನ್ನೇ ನೀಡುವ ಮೂಲಕ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕ ಸಾ ಪ ಪುತ್ತೂರು ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಹಾಗೂ ಚಿಗುರೆಲೆ ಸಾಹಿತ್ಯ ಬಳಗದ ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ “ಸಾಹಿತ್ಯದ ನಡೆಗೆ ಗ್ರಾಮದ ಕಡೆಗೆ” ಎಂಬ ಘೋಷ ವಾಕ್ಯದಲ್ಲಿ ನಡೆಯುತ್ತಿರುವ ಗ್ರಾಮ ಸಾಹಿತ್ಯ ಸಂಭ್ರಮದ 11ನೇ ಸರಣಿ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರಿಗೆ ಕನ್ನಡ ಪೇಟ ತೊಡಿಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಮಹಾಪೋಷಕ ಮಿತ್ರಂಪಾಡಿ ಜಯರಾಮ್ ರೈ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಲ್ಪಡುವ ಗ್ರಾಮ ಸಾಹಿತ್ಯ ಸಂಭ್ರಮ ಅಂತರ್ಜಾಲಗಳ ಮೂಲಕ ವಿದೇಶಗಳಲ್ಲೂ ವ್ಯಾಪಕ ಪ್ರಚಾರವನ್ನು ಪಡೆಯುತ್ತಿದೆ. ಹಾಗೂ ಹೊರನಾಡ ಕನ್ನಡಿಗರಿಂದ ಮುಕ್ತ ಕಂಠದ ಪ್ರಶಂಸನೆಗೆ ಪಾತ್ರವಾಗುತ್ತಿದೆಯೆಂದು ಹೇಳಿದರು.
ಹಿರೇಬಂಡಾಡಿ ಪಂಚಾಯಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಮಾತನಾಡಿ, ಇಂದು ಸಾಹಿತ್ಯದ ಮೂಲಕ ಮತ್ತೊಮ್ಮೆ ಮಕ್ಕಳನ್ನ ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸಲು ಹೊರಟ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ಅಭಿನಂದನೀಯ ಎಂದರು.
ಸಮಾರಂಭದಲ್ಲಿ ಹಿರಿಯ ಸಾಹಿತಿ ಗಣರಾಜ ಕುಂಬ್ಳೆ, ನಿವೃತ್ತ ಶಿಕ್ಷಕ ಉಮೇಶ್ ಗೌಡ ಬಂಡಾಡಿ, ಪಾಡ್ದನ ಕಲಾವಿದೆ ಕಲ್ಯಾಣಿ, ಕ್ರೀಡಾ ಕ್ಷೇತ್ರದ ವಿಶೇಷ ಸಾಧಕಿ ಕು. ಮಾನ್ಯ, ನಾಟಿ ವೈದ್ಯ ಕೃಷ್ಣಪ್ಪ ಕಜೆ, ಕಟೀಲು ಮೇಳದ ಯಕ್ಷಗಾನ ಕಲಾವಿದ ಶೇಖರ್ ಕೊರಂಬಾಡಿಯವರನ್ನು ಮಿತ್ರಂಪಾಡಿ ಜಯರಾಮ್ ರೈ ಅಭಿನಂದಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿ, ಗ್ರಾಮೀಣ ಮಟ್ಟದಲ್ಲಿ ಮಕ್ಕಳನ್ನ ಸಾಹಿತ್ಯ ಮತ್ತು ಪುಸ್ತಕದ ಓದಿನ ಕಡೆಗೆ ಕೊಂಡೊಯ್ಯುವ ಹಾಗೂ ರಾಜ್ಯಾಧ್ಯಕ್ಷ ಡಾ ಮಹೇಶ್ ಜೋಶಿ ಅವರ ಆಶಯದಂತೆ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಪ್ರಯತ್ನ ಇದಾಗಿದೆ. ಸರ್ವ ರೀತಿಯಲ್ಲಿ ಸಹಕಾರ ನೀಡಿದ ಹಿರೇ ಬಂಡಾಡಿ ಗ್ರಾಮದ ಮಹಾ ಜನತೆಗೆ ಧನ್ಯವಾದ ಸಮರ್ಪಿಸಿದರು.
ಹಿರೇಬಂಡಾಡಿ ಸ. ಪ್ರೌಢಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಮುಖ್ಯ ಶಿಕ್ಷಕ ಹರಿಕಿರಣ್. ಕೆ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸ್ಥಾಪಕಾಧ್ಯಕ್ಷ ಚಂದ್ರಮೌಳಿ ಕಡಂದೇಲು ವಂದಿಸಿದರು. ಶಿಕ್ಷಕಿ ಮಲ್ಲಿಕಾ ಐ. ಕಾರ್ಯಕ್ರಮ ನಿರೂಪಿಸಿದರು.