ಕುಡಿತ ಬಿಡುವ ಬಗ್ಗೆ ಸ್ವಯಂ ಮೂಗುದಾರ ಹಾಕುವ ಅಗತ್ಯವಿದೆ : 1777ನೇ ಮದ್ಯ ವರ್ಜನ ಶಿಬಿರದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ

ಪುತ್ತೂರು: ಮದ್ಯಪಾನಕ್ಕೆ ಪಂಚೇದ್ರಿಯಗಳು ಆಕರ್ಷಣೆಯಾಗದಂತೆ ದೂರವಿರುವುದರ ಜೊತೆಗೆ ಕುಡಿತ ನಿಲ್ಲಿಸುವ ವಿಚಾರದಲ್ಲಿ ಗಟ್ಟಿ ಮತ್ತು ದೃಡವಾದ ಮನಸ್ಸು, ಚಂಚಲತೆ ಇಲ್ಲದ ಹತೋಟಿ ಬೇಕಾಗಿದೆ. ಮದ್ಯವರ್ಜನ ಶಿಬಿರದಲ್ಲಿ ಭಾಗವಿಸಿದ ಎಲ್ಲರೂ ಕುಡಿತ ಬಿಡುವ ಬಗ್ಗೆ ಸ್ವಯಂ ಮೂಗುದಾರ ಹಾಕಿಕೊಂಡು ಹತೋಟಿಯಲ್ಲಿರಬೇಕು ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನುಡಿದರು.

ಅವರು ಮಂಗಳವಾರ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಕಳೆದ ಆರು ದಿನಗಳಿಂದ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಟ್ರಸ್ಟ್ಹಾಗೂ ಬೆಂಗಳೂರು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆಯುತ್ತಿರುವ ೧೭೭೭ನೇ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಮದ್ಯರ್ಜನ ಶಿಬಿರವು ಸಣ್ಣದಾಗಿದ್ದರೂ ಸಾಮಾನ್ಯವಲ್ಲ. ಇದೊಂದು ಪರಿಣಾಮಕಾರಿಯಾದ ಕಾರ್ಯಕ್ರಮವಾಗಿದೆ.  ಬಹಳಷ್ಟು ಮಂದಿಯ ಹಣವು ಕುಡಿತದಿಂದಾಗಿ ಪೋಲಾಗುತ್ತಿದ್ದು, ಕುಡಿತಕ್ಕಾಗಿ ವ್ಯಯಿಸುವ ಹಣದಿಂದ ಕುಟುಂಬ ಬದುಕು ಹಾಳಾಗುತ್ತಿದೆ. ಕುಡಿದವರು ಕೆಟ್ಟವರಲ್ಲ ಆದರೆ ಕುಡಿತದಿಂದಾಗಿ ಮತಿ ಭ್ರಮಣೆಯಾಗಿ ಕೆಟ್ಟತನ ಮಾಡುತ್ತಾರೆ. ಕುಡಿತವು ತಪ್ಪು, ಹೇಸಿಗೆ, ಅಪಾಯಕಾರಿ ಮತ್ತು ಹಾಳು ಕೆಲಸಗಳಿಗೆ ಪ್ರೇರಣೆ ನೀಡುತ್ತದೆ. ವ್ಯಕ್ತಿತ್ವವನ್ನು ನಾಶಮಾಡುವ ಮದ್ಯಪಾನವನ್ನು ದೃಡ ಮನಸ್ಸಿನಿಂದ ಬಿಡಬೇಕು. ಇದರಿಂದ ಕುಟುಂಬ ಬುದುಕು ಉತ್ತಮವಾಗುತ್ತದೆ ಎಂದರು.































 
 

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮದ್ಯದ ಚಟದಿಂದಾಗಿ ಆರ್ಥಿಕ,ಮಾನಸಿಕ ಮತ್ತು ಆರೋಗ್ಯವನ್ನು ನಾಶಪಡಿಸಿ ಇಡೀ ಕುಟುಂಬವನ್ನು ಸರ್ವನಾಶ ಮಾಡುತ್ತದೆ. ಮದ್ಯವರ್ಜನ ಶಿಬಿರಕ್ಕೆ ಶ್ರೀ ಕ್ಷೇತ್ರದ ವತಿಯಿಂದ ಮಾಡಲಾಗುತ್ತಿರುವ ಖರ್ಚುಗಳು ಎಂದೂ ವ್ಯರ್ಥವಾಗುವುದಿಲ್ಲ. ಎಲ್ಲವೂ ಉತ್ತಮವಾಗಿ ಸದುಪಯೋಗವಾಗುತ್ತಿದೆ. ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಮುಂದೆ ಸಂಪೂರ್ಣವಾಗಿ ಮದ್ಯಪಾನದಿಂದ ದೂರವಾಗಬೇಕು ಎಂದರು.

ಮದ್ಯವರ್ಜನ ಶಿಬಿರದ ಶಿಬಿರಾರ್ಥಿ ಪ್ರವೀಣ್ ಮತ್ತು ಕಳೆದ ೧೮ ವರ್ಷಗಳ ಹಿಂದೆ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಮದ್ಯಮುಕ್ತರಾದ ಕಬಕ ನಿವಾಸಿ ಅಣ್ಣು ಎಂಬವರ ಪತ್ನಿ ಗುಲಾಬಿ ಅನಿಸಿಕೆ ವ್ಯಕ್ತ ಪಡಿಸಿದರು. ೮೭ ಮಂದಿ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಭಟ್, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಹೆಗ್ಡೆ, ಕಡಬ ತಾಲೂಕು ಅಧ್ಯಕ್ಷ ವಕೀಲ ಮಹೇಶ್ ಸವಣೂರು, ವೈದ್ಯ ಡಾ. ಸುರೇಶ್ ಪುತ್ತೂರಾಯ, ಸುಳ್ಯ ತಾಲೂಕು ಅಧ್ಯಕ್ಷ ಲೋಕನಾಥ ಅಮೆಚೂರು, ಮಾಜಿ ಅಧ್ಯಕ್ಷರಾದ ಮಹಾಬಲ ರೈ ಒಳತ್ತಡ್ಕ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಶಶಿಕುಮಾರ್ ರೈ ಬಾಲ್ಯೊಟ್ಟು, ಸಾಜ ರಾಧಾಕೃಷ್ಣ ಆಳ್ವ, ಜನಜಾಗೃತಿ ವೇದಿಕೆ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್, ದುಗ್ಗೇ ಗೌಡ, ಯೋಜನೆಯ ದ.ಕ.ಜಿಲ್ಲಾ ನಿರ್‍ದೇಶಕ ಪ್ರವೀಣ್ ಕುಮಾರ್, ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯೋಜನೆಯ ಗಣೇಶ್ ಆಚಾರ್ಯ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top