ಪುತ್ತೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೂಲಕ ಶತಮಾನಗಳ ಹೋರಾಟದ ಫಲವಾಗಿ ಕನಸು ನನಸಾಗುತ್ತಿದೆ. ಈ ನಿಟ್ಟಿನಲ್ಲಿ ವಿಶೇಷ ಜವಾಬ್ದಾರಿ ಇಂದಿನಿಂದ ಆರಂಭವಾಗುತ್ತಿದೆ. ಮುಂದೆ ಆಚಂದ್ರಾರ್ಕವಾಗಿ ರಾಮಮಂದಿರ ಉಳಿಯಬೇಕು. ಮತ್ತೊಮ್ಮೆ ಪರಕೀಯರ ಪಾಲಾಗಬಾರದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಸೋಮವಾರ ರಾತ್ರಿ ವೈಭವದಿಂದ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಹಿಂದುಗಳು ಹಿಂದೂಗಳಾಗಿ ಉಳಿದರೆ ರಾಮ ಮಂದಿರ ಉಳಿಯುತ್ತದೆ. ಜತೆಗೆ ಮೋದಿ ಇರುವಷ್ಟು ಕಾಲ ಮಂದಿರ ಇರುತ್ತದೆ. ಮೋದಿಯನ್ನು ಕಿತ್ತೊಗೆಯುವ ಅಪಸ್ವರಗಳು ಪ್ರಸ್ತುತ ಕೇಳಿ ಬರುತ್ತಿದ್ದು, ಅದನ್ನು ಸುಳ್ಳಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಸನಾತನ ಸಂಸ್ಕೃತಿಯನ್ನು ರಕ್ತಗತಗೊಳಿಸಬೇಕಾದ ಅಗತ್ಯವಿದೆ ಎಂದು ನುಡಿದರು.
ಸ್ವಾಮೀಜಿಯವರು ಶ್ರೀನಿವಾಸ ಕಲ್ಯಾಣೋತ್ಸವದ ಮಾಂಗಲ್ಯ ಧಾರಣೆ ಸಹಿತ ಎಲ್ಲಾ ಕಾರ್ಯಕ್ರಮ ವೀಕ್ಷಣೆ ಮಾಡಿದರು. ಈ ಸಂದರ್ಭ ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯಿಂದ ಸ್ವಾಮೀಜಿಗಳಿಗೆ ಪುಷ್ಪವೃಷ್ಠಿ ಸಮರ್ಪಿಸಲಾಯಿತು. ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶಶಾಂಕ ಕೊಟೇಚಾ, ಕಾರ್ಯಾಧ್ಯಕ್ಷ ಉಮೇಶ್‍ಕೋಡಿಬೈಲು, ಪ್ರಸನ್ನ ಕುಮಾರ ಮಾರ್ತ ಸಹಿತಿ ಸೇವಾರ್ಥಿಗಳು ಪುಷ್ಪವೃಷ್ಠಿ ಮಾಡಿದರು.
ಸೋಮವಾರ ರಾತ್ರಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದು, ಶ್ರೀನಿವಾಸ ಕಲ್ಯಾಣೋತ್ಸವವನ್ನು ಸಂಭ್ರಮದಿಂದ ವೀಕ್ಷಿಸಿದರು. ಈ ಸಂದರ್ಭದಲ್ಲಿ ಭಜನೆ, ಭಜನಾ ಸಂಕೀರ್ತನೆ, ಆಕರ್ಷಕ ಕುಣಿತ ಭಜನೆ, ಭಕ್ತಿ ರಸಮಂಜರಿ ಜರಗಿತು. ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ ಸುಡುಮದ್ದು ಪ್ರದರ್ಶನವೂ ನಡೆಯಿತು. ತಿರುಪತಿ ಕ್ಷೇತ್ರ ಮೂಲದ ಬೆಂಗಳೂರಿನ ಲಕ್ಷ್ಮೀಪತಿ ನೇತೃತ್ವದಲ್ಲಿ ಸುಮಾರು 27 ಮಂದಿ ಆಗಮಿಕರು ಕಲ್ಯಾಣೋತ್ಸವವನ್ನು ನಡೆಸಿಕೊಟ್ಟರು. ಸಂಜೆ ಗೋಧೋಳಿ ಸಮಯದಲ್ಲಿಭಕ್ತರ ಗೋವಿಂದನ ಉದ್ಘೋಷದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಮಹಾಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್ ಬನ್ನೂರು, ಕೋಶಾಧಿಕಾರಿ ಉದಯ ಕುಮಾರ್ ರೈ ಸಂಪ್ಯ, ಸ್ವಾಗತ ಸಮಿತಿ ಅಧ್ಯಕ್ಷ ಕಿರಣ್‍ಧರ್ಮಸ್ಥಳ, ಸಂಚಾಲಕ ರವಿಕುಮಾರ್ ರೈ ಕೆದಂಬಾಡಿ, ಕಾರ್ಯದರ್ಶಿಗಳಾದ ಗಣೇಶ್ ಚಂದ್ರ ಭಟ್, ನಟೇಶ್‍ಪೂಜಾರಿ, ವಿವಿಧ ಸಮಿತಿ ಸಂಚಾಲಕರು, ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.