ಪುತ್ತೂರು: ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ತಿರುಪತಿ ತಿರುಮಲ ಶ್ರೀ ಬಾಲಾಜಿ ದೇವರ ಉತ್ಸವ ಮೂರ್ತಿಯನ್ನು ಬರಮಾಡಿಕೊಳ್ಳುವ ನಿಟ್ಟಿನಲ್ಲಿ ವೈಭವದ ಶೋಭಾಯಾತ್ರೆ ಬೊಳುವಾರು ವೃತ್ತದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತನಕ ನಡೆಯಿತು.
ಬೊಳುವಾರು ವೃತ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸಂಪುಟ ಮಠದ ಶ್ರಿ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಬಳಿಕ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ಶ್ರದ್ಧಾ ಭಕ್ತಿಪೂರ್ವಕ ಸ್ವಾಗತಿಸಿ ಚೆಂಡೆ, ವಾದ್ಯಗಳೊಂದಿಗೆ ಆಯೋಧ್ಯಾ ಮಂಟಪಕ್ಕೆ ಕರೆತರಲಾಯಿತು. ಅಲ್ಲಿ ಶ್ರೀದೇವರನ್ನು ತಿರುಮಲದ ಪುರೋಹಿತರು ಪ್ರತಿಷ್ಠಾಪಿಸಿದರು. ಬಳಿಕ ನಡೆದ ಸನಾತನ ಸಮಾಗಮದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸಂಪುಟ ಮಠದ ಶ್ರಿ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.
ರಾತ್ರಿ ಶ್ರೀದೇವಿ, ಭೂದೇವಿ ಹಾಗೂ ಶ್ರೀನಿವಾಸ ದೇವರಲ್ಲಿ ಭಕ್ತಾದಿಗಳ ಇಷ್ಟಾರ್ಥ ನೆರವೇರಿಕೆಗೆ ಪ್ರಾರ್ಥಿಸಲಾಯಿತು. ಸ್ಯಾಕ್ಸೋಫೋನ್ ವಾದಕ ಪಿ.ಕೆ.ಗಣೇಶ್ ಅವರು ಶ್ರೀನಿವಾಸ, ಶ್ರೀ ಮಹಾಲಿಂಗೇಶ್ವರ ಹಾಗೂ ಗಣಪತಿ ಕುರಿತ ಕೀರ್ತನೆಗಳನ್ನು ನುಡಿಸಿದರು. ವೇದ ಘೋಷ ಮಂತ್ರದೊಂದಿಗೆ ಶ್ರೀನಿವಾಸ ದೇವರಿಗೆ ಮಂಗಳಾರತಿ ಬೆಳಗಲಾಯಿತು. ಬಳಿಕ ನೆರೆದಿದ್ದ ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗಿತು.
ಈ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಸುರೇಶ್ ಪುತ್ತೂರಾಯ, ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶಶಾಂಕ ಕೊಟೇಚಾ, ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು, ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ಸ್ವಾಗತ ಸಮಿತಿ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ, ಸ್ವಯಂ ಸೇವಕ ಸಮಿತಿ ಅಧ್ಯಕ್ಷ ಅನಿಲ್ ತೆಂಕಿಲ, ಪ್ರಚಾರ ಸಮಿತಿ ಸಂಚಾಲಕ ನವೀನ್ ರೈ ಪಂಜಳ ಮತ್ತಿತರರು ಉಪಸ್ಥಿತರಿದ್ದರು.