ಪುತ್ತೂರು: ಡಿ.24 ಹಾಗೂ 25 ರಂದು ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮ ಕಾರ್ಯಕ್ರಮದ ಅಂಗವಾಗಿ ಬೃಹತ್ ಹೊರೆಕಾಣಿಕೆ ಮೆರವಣಿಗೆ ಶನಿವಾರ ಸಂಜೆ ದರ್ಬೆ ವೃತ್ತದಿಂದ ಸಾಗಿ ಬಂತು.
ತಾಲೂಕಿನಾದ್ಯಂತದಿಂದ ಬಂದ ಹೊರೆಕಾಣಿಕೆ ದರ್ಬೆ ವೃತ್ತದಲ್ಲಿ ಸೇರಿ ಅಲ್ಲಿ ಉದ್ಘಾಟನೆಗೊಂಡು ಚೆಂಡೆ, ವಾದ್ಯಗಳೊಂದಿಗೆ ಹೊರೆಕಾಣಿಕೆ ನೂರಾರು ವಾಹನಗಳಲ್ಲಿ ಮುಖ್ಯರಸ್ತೆಯಿಂದ ಸಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಗೆ ತೆರಳಿ ಹೊರೆಕಾಣಿಕೆ ಸಮರ್ಪಣೆಯಾಯಿತು.
ಈ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಅಧ್ಯಕ್ಷ ಶಶಾಂಕ ಕೊಟೇಚಾ, ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು, ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್ಬನ್ನೂರು, ಕೋಶಾಧಿಕಾರಿ ಉದಯ ಕುಮಾರ್ ರೈ ಸಂಪ್ಯ, ಸ್ವಾಗತ ಸಮಿತಿ ಅಧ್ಯಕ್ಷ ಕಿರಣ್ಧರ್ಮಸ್ಥಳ, ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ, ವಿವಿಧ ಸಮಿತಿಯ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.