ಪುತ್ತೂರು: ಶಿಕ್ಷಣ ಜಗತ್ತನ್ನು ಬದಲಾಯಿಸುವ ಪ್ರಮುಖ ಅಸ್ತ್ರವಾಗಿದ್ದು, ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದರೊಂದಿಗೆ ಜ್ಞಾನವುಳ್ಳ ನಾಗರಿಕನನ್ನಾಗಿ ಮಾಡಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಅರುಣ್ ಫುಟ್ರಾಡೋ ಹೇಳಿದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಡಿ.23 ರಂದು ನಡೆದ ‘ಫಿಲೋ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಶಿಕ್ಷಣ ಎಲ್ಲರನ್ನೂ ಸಬಲಗೊಳಿಸುತ್ತದೆ. ಇದು ಆಧುನಿಕ ಮತ್ತು ಕೈಗಾರಿಕೀಕರಣಗೊಂಡ ಜಗತ್ತನ್ನು ರೂಪಿಸುವ ಪ್ರಮುಖ ಅಂಶವಾಗಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಗತಿಯನ್ನು ನಿಭಾಯಿಸಲು ಜನರಿಗೆ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.
ಅತಿಥಿಗಳಾಗಿ ಲೇಜಿನ ಕ್ಯಾಂಪಸ್ ನಿರ್ದೇಶಕ ರೆ.ಫಾ.ಸ್ಟ್ಯಾನಿ ಪಿಂಟೋ, ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಡಾI ಆಂಟೋನಿ ಪ್ರಕಾಶ್ ಮೊಂತೇರೋ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ ಕೋಸ್ಟಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ವಂ.ರೆ.ಫಾ.ಲಾರೆನ್ಸ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು ಜೀವನ ಒಬ್ಬರ ಜೀವನದ ಅತ್ಯಂತ ಸ್ಮರಣೀಯ ವರ್ಷಗಳಲ್ಲಿ ಒಂದಾಗಿದೆ. ಇದು ಶಾಲಾ ಜೀವನಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಕಾಲೇಜು ಜೀವನವು ನಮಗೆ ಮೊದಲು ಪರಿಚಯವಿಲ್ಲದ ಹೊಸ ಅನುಭವಗಳು ಮತ್ತು ವಿಷಯಗಳಿಗೆ ನಮ್ಮನ್ನು ಒಡ್ಡುತ್ತದೆ ಎಂದರು.
ಸಾಹಿತ್ಯಕ, ಸಾಂಸ್ಕೃತಿಕ, ಕ್ರೀಡೆ, ಎನ್.ಸಿ.ಸಿ ಮತ್ತು ರೋವರ್ಸ್ ರೇಂಜರ್ಸ್ ನ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದ ವಿದ್ಯಾರ್ಥಿಗಳು, ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿಯನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
2022- 23 ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ 10ನೇ ರಾಂಕ್ ಪಡೆದ ಸಮೃದ್ಧಿ ರೈ, ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಪ್ರತಿ ವಿಷಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಬಹುಮುಖ ಪ್ರತಿಭಾ ಪ್ರಶಸ್ತಿ ಪಡೆದ ದ್ವಿತೀಯ ವಿಜ್ಞಾನ ವಿಭಾಗದ ವಿಂಧ್ಯಾ ಶ್ರೀ ರೈಯವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಯಂತ್ ನಡುಬೈಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ.ರೈ, ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಪ್ರಶಾಂತ್ ಭಟ್ ಪಿ., ಫಿಲೋಮಿನಾ ಮೊಂತೇರೋ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವನ್ ಪೊನ್ನಪ್ಪ ಎಮ್. ಎನ್. ಸ್ವಾಗತಿಸಿ, ಕಾರ್ಯದರ್ಶಿ ತನ್ವಿ.ಕೆ ಅತಿಥಿಗಳನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಪೃಥ್ವಿ.ಕೆ ವಂದಿಸಿದರು. ಉಪನ್ಯಾಸಕ ಸಂತೋಷ್ ಕ್ಲಾರೆನ್ಸ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.