ಪುತ್ತೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಜಾರಿಯಲ್ಲಿರುವ ಹಿಜಾಬ್ ನಿಷೇಧವನ್ನು ಹಿಂಪಡೆಯುವ ಹೇಳಿಕೆ ನೀಡಿರುವುದು ಅತ್ಯಂತ ಕಳವಳಕಾರಿಯಾಗಿದೆ. ಈ ಮೂಲಕ ಕಾಂಗ್ರೇಸ್ ಸರಕಾರದ ಮುಸಲ್ಮಾನರ ತುಷ್ಠೀಕರಣ ಮಿತಿ ಮೀರುತ್ತಿದ್ದು, ಹಿಜಾಬ್ ನಿಷೇಧವನ್ನು ಹಿಂಪಡೆದರೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಕೇಸರಿ ಚಳುವಳಿಯನ್ನು ಆರಂಭಿಸುವುದಾಗಿ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಎರಡು ವರ್ಷಗಳ ಹಿಂದೆ ಉಡುಪಿಯ ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್ ವಿವಾದ ಕುರಿತು ತೀರ್ಪು ನೀಡಿರುವ ಉಚ್ಛ ನ್ಯಾಯಾಲಯ, ಹಿಜಾಬ್ ಧಾರಣೆಯ ಕುರಿತ ನಿರ್ಧಾರ ತೆಗೆದುಕೊಳ್ಳಲು ಆಯಾ ಶಾಲೆಗಳ ಆಡಳಿತ ಮಂಡಳಿಗಳಿಗೆ ಅನುಮತಿ ನೀಡಿತ್ತು. ತೀರ್ಪಿನ ಅನುಗುಣವಾಗಿ ಹಿಂದಿನ ಸರಕಾರ ಹಿಜಾಬ್ ನಿಷೇಧ ಜಾರಿಗೆ ತಂದಿತ್ತು. ಆದರೆ ಈಗ ಮುಸಲ್ಮಾನರ ಓಲೈಕೆಗಾಗಿ ಕಾಂಗ್ರೇಸ್ ಸರಕಾರ ಈ ರೀತಿಯ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ವಿವಾದ ಆರಂಭವಾದಾಗ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಹಾಗು ವಿದ್ಯಾ ದೇಗುಲದಲ್ಲಿ ಜಾತಿ, ಮತ, ಧರ್ಮಗಳ ಭೇದ ಇರಬಾರದೆಂಬ ದೃಷ್ಠಿಯಿಂದ ಬಜರಂಗದಳ ನೇರ ಹೋರಾಟಕ್ಕೆ ಇಳಿದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.