ದತ್ತ ಜಯಂತಿಗೆ ಬಿಗಿ ಬಂದೋಬಸ್ತ್ | ಭದ್ರತೆಗಾಗಿ 4 ಸಾವಿರ ಪೊಲೀಸರ ನಿಯೋಜನೆ | ಸಿಸಿ ಕ್ಯಾಮರಾ ಅಳವಡಿಕೆ

ಚಿಕ್ಕಮಗಳೂರು: ದತ್ತ ಜಯಂತಿ ಸಂದರ್ಭದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ವಿಕ್ರಮ್‌ ಅಮಟೆ ತಿಳಿಸಿದ್ದಾರೆ.

ಡಿ. 24 ರಿಂದ 26 ರವರೆಗೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ವತಿಯಿಂದ ದತ್ತ ಜಯಂತಿ ಆಚರಣೆ ಮಾಡಲಾಗುತ್ತಿದೆ. ಅನಸೂಯ ಜಯಂತಿ, ಶೋಭಾಯಾತ್ರೆ ಹಾಗೂ ದತ್ತಪಾದುಕೆ ದರ್ಶನ ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಹಿಂದೂ ಸಂಘಟನೆಗಳ ಮುಖಂಡರು ಮತ್ತು ಮುಸ್ಲಿಂ ಮುಖಂಡರ ಸಭೆಯಲ್ಲಿ ತಿಳಿಸಲಾಗಿದೆ. 25ರಂದು ಶೋಭಾಯಾತ್ರೆ ನಡೆಯಲಿದ್ದು, ಅದೇ ದಿನ ಕ್ರಿಸ್‌ಮಸ್‌ ಕೂಡ ಇರುವುದರಿಂದ ಕ್ರೈಸ್ತ ಮುಖಂಡರ ಸಭೆಯನ್ನೂ ನಡೆಸಲಾಗಿದೆ. ಕ್ರಿಸ್‌ಮಸ್‌ ಆಚರಣೆಗೆ ಬೇಕಿರುವ ಭದ್ರತೆ ನೀಡಲಾಗುವುದು ಎಂಬ ಮಾಹಿತಿ ನೀಡಿದರು.































 
 

ಡಿ.23ರಿಂದ ಪೊಲೀಸ್‌ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಮತ್ತು ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ವ್ಯಾಪ್ತಿಗೆ ಪ್ರತ್ಯೇಕವಾಗಿ ಸಿಬ್ಬಂದಿ ನಿಯೋಜಿಸಲಾಗಿದೆ. ಏಳು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳು, 30 ಡಿವೈಎಸ್‌ಪಿಗಳು, 60 ಇನ್‌ಸ್ಪೆಕ್ಟರ್‌ಗಳು ಭದ್ರತೆ ನೋಡಿಕೊಳ್ಳುವರು ಎಂದು ವಿವರಿಸಿದರು.

ಚಳಿ ವಾತಾವರಣ ಇರುವುದರಿಂದ 45 ವರ್ಷದೊಳಗಿನ ಒಳಗಿನ ಸಿಬ್ಬಂದಿಯನ್ನು ಐ.ಡಿ.ಪೀಠ ವ್ಯಾಪ್ತಿಗೆ ನಿಯೋಜಿಸಲಾಗಿದೆ. ಕೋವಿಡ್‌ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದ್ದು ಗಿರಿಭಾಗದಲ್ಲಿಎರಡು ವೈದ್ಯಕೀಯ ತಂಡವನ್ನು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ ಎಂದರು.

ಜಿಲ್ಲೆಯ 28 ಕಡೆ ಚೆಕ್‌ಪೋಸ್ಟ್‌:

ಜಿಲ್ಲೆಯ ಗಡಿ ಭಾಗಗಳು ಸೇರಿ 28 ಕಡೆ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಎಲ್ಲಚೆಕ್‌ಪೋಸ್ಟ್‌ಗಳಲ್ಲೂ ಸ್ಥಳೀಯ ಸಿಬ್ಬಂದಿ ಜತೆಗೆ ಹೊರ ಜಿಲ್ಲೆಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಗೆ ಬರುವ ಎಲ್ಲ ವಾಹನಗಳ ತಪಾಸಣೆ ನಡೆಸಲಿದ್ದು, ದತ್ತ ಜಯಂತಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ತಿಳಿವಳಿಕೆಯನ್ನೂ ಸಹ ನೀಡಲಿದ್ದಾರೆ. 36 ವಿಶೇಷ ದಂಡಾಧಿಕಾರಿಗಳನ್ನು ಜಿಲ್ಲಾಡಳಿತ ನಿಯೋಜನೆ ಮಾಡಿದೆ. ಅವರು ಶೋಭಾಯಾತ್ರೆ ಮತ್ತು ಪಾದುಕೆ ದರ್ಶನ ಸೇರಿ ಎಲ್ಲೆಡೆ ಕಾರ್ಯನಿರ್ವಹಿಸಲಿದ್ದು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದರೆ ಸ್ಥಳದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರದೆ

ಸಿಸಿ ಕ್ಯಾಮೆರಾ ಕಣ್ಗಾವಲು:

ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ 300 ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಎಲ್ಲರ ಚಲನವಲನದ ಮೇಲೆ ಇಲಾಖೆ ನಿಗಾ ವಹಿಸಲಿದೆ. ಇದಕ್ಕಾಗಿ ನಿಗಾ ಕೇಂದ್ರ ತೆರೆಯಲಾಗಿದೆ. 50 ಸಿಬ್ಬಂದಿಗೆ ಬಾಡಿ ಕ್ಯಾಮೆರಾ ಕೂಡ ನೀಡಲಾಗಿದ್ದು, ಡ್ರೋಣ್‌ಗಳ ಮೂಲಕವೂ ಚಲನವಲನಗಳನ್ನು ಗಮನಿಸಲಾಗುವುದು ಎಂದು ಡಾ. ವಿಕ್ರಂ ಅಮಟೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top