ಪುತ್ತೂರು: ಧರ್ಮದ ಬಗೆಗೆ ಎಳವೆಯಿಂದ ಸರಿಯಾದ ಮಾರ್ಗದರ್ಶನ ಇರದಿರುವುದೇ ಹಿಂದೂ ಧರ್ಮ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಮೂಲವೆನಿಸಿದೆ. ಯಾವಾಗ ಸನಾತನ ಧರ್ಮದ ಉತ್ಕೃಷ್ಟತೆ ಎಳೆಯ ವಯಸ್ಸಿನಿಂದಲೇ ಅರ್ಥವಾಗುತ್ತದೋ ಆಗ ಮತಾಂತರದಂತಹ ವಿಕೃತತೆಗೆ ಅವಕಾಶವಾಗುವುದಿಲ್ಲ. ಸನಾತನ ಹಿಂದೂ ಧರ್ಮದ ಮೇರು ಸಂಗತಿಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ತಿರುವನಂತಪುರಂನ ಆರ್ಷ ವಿದ್ಯಾ ಸಮಾಜದ ಸ್ವಯಂಸೇವಕಿ ಶೃತಿ ಭಟ್ ಹೇಳಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಹಿಂದೂ ಧರ್ಮದ ವಿಚಾರಗಳನ್ನು ಅನೇಕ ಕಥೆಗಳ ಮೂಲಕ ಅರ್ಥ ಮಾಡಿಸುವ ಸಂಪ್ರದಾಯ ನಮ್ಮಲ್ಲಿದೆ. ಆದರೆ ಆ ಕಥೆಗಳೆಲ್ಲ ಪೊಳ್ಳು ಎಂದು ವಾದಿಸುವ ಜನರ ಮುಂದೆ ಧರ್ಮದ ನಿಜವಾದ ಸತ್ವವನ್ನು ಅನಾವರಣಗೊಳಿಸುವ ಶಕ್ತಿ ಹಿಂದೂ ಯುವಕ ಯುವತಿಯರಲ್ಲಿರುವುದಿಲ್ಲ. ಕೇವಲ ಕಥೆಯಲ್ಲಿ ಹೇಳಿದ್ದಷ್ಟೇ ಧರ್ಮ ಎಂದು ಅವರು ಭಾವಿಸಿಕೊಳ್ಳುತ್ತಾರೆ. ಆ ಕಥೆಯ ಆಧಾರದ ಮೇಲೆ ಅನ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಗೊಂದಲಕ್ಕೊಳಗಾಗುತ್ತಾರೆ. ಕಥೆ ಕೇವಲ ಮೇಲ್ನೋಟದ ಸಂಗತಿ ಮಾತ್ರ. ನಿಜವಾದ ಸತ್ವ ಧರ್ಮದ ಆಳಕ್ಕಿಳಿದಾಗ ಮಾತ್ರ ಅರ್ಥವಾಗುತ್ತದೆ. ಆ ಕೆಲಸ ಜರೂರಾಗಿ ಆಗಬೇಕಿದೆ ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕೇವಲ ಹುಡುಗಿಯರಷ್ಟೇ ಅಲ್ಲ, ಹುಡುಗರೂ ಧರ್ಮ ಜಾಗೃತಿಯನ್ನು ಬೆಳೆಸಿಕೊಳ್ಳಬೇಕು. ಹಿಂದೂ ಹೆಣ್ಣುಮಕ್ಕಳಿಗಾಗುವ ಅನ್ಯಾಯ ತಮ್ಮ ಸೋದರಿಯರ ಮೇಲಾಗುತ್ತಿರುವ ದೌರ್ಜನ್ಯ ಎಂದು ಪರಿಭಾವಿಸಬೇಕು. ಮತಾಂತರವನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತೆ ವಹಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶೃತಿ ಭಟ್ ಅವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ಯೋಗಶಿಕ್ಷಕಿ ಶರಾವತಿ ರವಿನಾರಾಯಣ ಸನ್ಮಾನಿಸಿ ಅಭಿನಂದಿಸಿದರು. ಶಿಕ್ಷಕಿ ದಿವ್ಯಾ ವಂದಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು.