ಪುತ್ತೂರು: ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಡಿ.24-25 ರಂದು ಜರಗುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮಕ್ಕೆ ಭರದ ಸಿದ್ಧತೆಗಳು ನಡೆದಿದ್ದು, ಕಾರ್ಯಕ್ರಮದ ವಿಶೇಷತೆ ಹೀಗಿದೆ.
50 ಸಾವಿರ ಶ್ರೀನಿವಾಸ ಕಲ್ಯಾಣ ಲಡ್ಡು ಪ್ರಸಾದ ಸೇವೆ ಸೇರಿದಂತೆ ಅನ್ನದಾನ ಸೇವೆ, ಸರ್ವ ಸೇವೆ, ಫಲಪಂಚಾಮೃತ ಅಭಿಷೇಕ ಸೇವೆ , ಮಹಾನಿವೇದನಾ ಸೇವೆ , ಸುಪ್ರಭಾತ ಸೇವೆ ಹಾಗೂ ಈಗಾಗಲೇ ನೋಂದಾಣಿಯಾಗಿದೆ.
ಅಂದಾಜು 1.25 ಲಕ್ಷ ಜನ ಎರಡು ದಿನ ಭಾಗವಹಿಸಲಿದ್ದು, ಬೆಳಿಗ್ಗೆ ಫಲಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಇರಲಿದೆ. ಅದಕ್ಕಾಗಿ ವಿಶೇಷ ಅನ್ನಛತ್ರ ಪೆಂಡಲ್ ನಿರ್ಮಿಸಲಾಗಿದೆ. ವಿಶೇಷ ಅತ್ಯಾಕರ್ಷಕ ಹೂವಿನ ಆಲಂಕಾರವಿರಲಿದೆ.
ಮೆರವಣಿಗೆ ಹೇಗಿರಲಿದೆ ಗೊತ್ತೇ ..?
ಉಪ್ಪಿನಂಗಡಿಯಿಂದ ದೇವರನ್ನು ಬರಮಾಡಿಕೊಂಡು ಬೊಳುವಾರಿನಿಂದ ಪೂರ್ಣಕುಂಭ ಸ್ವಾಗತವಿರಲಿದೆ. ಮೆರವಣಿಗೆಯಲ್ಲಿ ಎದುರಿಗೆ ಪೂರ್ಣಕುಂಭ ಸ್ವಾಗತ ತಂಡ, ಅದರ ಹಿಂದೆ ರುದ್ರಪಾರಾಯಣ ತಂಡ ನಂತರ ವಿಷ್ಣು ಸಹಸ್ರನಾಮ ತಂಡ, ಭಜನಾ ತಂಡ, ಅದರ ಹಿಂದೆ ಶಂಖನಾದ ತಂಡ, ತೆರೆದ ವಾಹನದಲ್ಲಿ ಶ್ರೀನಿವಾಸ ದೇವರ ಮೂರ್ತಿ ಇರಲಿದೆ. ಚೆಂಡೆ ಅದರ ಹಿಂದೆ ಭಗವಧ್ಬಕ್ತರು ದೇವರ ನಾಮಸ್ಮರಣೆಯೊಂದಿಗೆ ಸಾಗಲಿದ್ದಾರೆ.
ಪುತ್ತೂರು ಪೇಟೆ ಕೇಸರಿಮಯ : ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮದ ಪ್ರಯುಕ್ತ ಪುತ್ತೂರು ಪೇಟೆ ಸಂಪೂರ್ಣ ಕೇಸರಿಮಯವಾಗಿರಲಿದೆ. ಇದಕ್ಕಾಗಿ ಕಾರ್ಯಕರ್ತರ ತಂಡ ರಾತ್ರಿ ಕೆಲಸ ಮಾಡುತ್ತಿದೆ.
ಸಾವಿರಕ್ಕೂ ಮಿಕ್ಕಿ ಬ್ಯಾನರ್ :
ಶ್ರೀನಿವಾಸ ದೇವರ ಅತ್ಯಾಕರ್ಷಕ ಪೋಟೋವಿರುವ ಬ್ಯಾನರ್ ಹಾಗೂ ದೊಡ್ಡ ಹೋಲ್ಡಿಂಗ್ಸ್ ಪುತ್ತೂರು ಪೇಟೆಯ ಡಿವೈಡರ್ ನಲ್ಲಿ ಹಾಗೂ ಪೇಟೆಯೆಲ್ಲೆಡೆ ಈಗಾಗಲೇ ಹಾಕಲಾಗಿದೆ. ಉಪ್ಪಿನಂಗಡಿ, ಕಡಬ, ಸವಣೂರು, ಬೆಳ್ಳಾರೆ, ಸುಳ್ಯ, ವಿಟ್ಲ, ಬಂಟ್ವಾಳದಲ್ಲಿ ಈಗಾಗಲೇ ಭಕ್ತಾದಿಗಳು ಬ್ಯಾನರ್ ಅಳವಡಿಸಿದ್ದಾರೆ.