ಉಪ್ಪಿನಂಗಡಿ: ಅಟೋ ರಿಕ್ಷಾ ಹಾಗೂ ಲಾರಿ ಡಿಕ್ಕಿ ಹೊಡೆದುಕೊಂಡು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ಕುಮಾರಧಾರಾ ನದಿಯ ಸೇತುವೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ರಿಕ್ಷಾ ಚಾಲಕ ಫ್ರಾಂಕ್ಲಿನ್ ಗ್ಲನ್ ಲೋಬೋ (23) ಅವರ ಕಾಲು ತುಂಡರಿಸಲ್ಪಟ್ಟಿದೆ. ಪ್ರಯಾಣಿಕರಾದ ಉತ್ತರ ಭಾರತ ಮೂಲದ ಅಜಯ್ ಖಾರ್ವಾಲ್ (17), ಪೂರನ್ ಸಿಂಗ್ ಖಾರ್ವಾಲ್ (29) ಎಂಬವರೂ ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುಗಳು ಪೆರ್ನೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಗಾಯಾಳುಗಳೆಲ್ಲರನ್ನು ಉಪ್ಪಿನಂಗಡಿಯ ಅಂಬುಲೆನ್ಸ್ ಚಾಲಕ ಫಾರೂಕ್ ಜಿಂದಗಿ ತ್ವರಿತವಾಗಿ ಪುತ್ತೂರು ಆಸ್ಪತ್ರೆಗೆ ರವಾನಿಸುವಲ್ಲಿ ಸಹಕರಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಘಟನೆಯಿಂದ ತಡೆಹಿಡಿಯಲ್ಪಟ್ಟ ಹೆದ್ದಾರಿ ಸಂಚಾರವನ್ನು ಸುಗಮಗೊಳಿಸಿದರು.