ಪುತ್ತೂರು: ತುಳು ಭಾಷಿಕರಾದ ಆದಿ ದ್ರಾವಿಡ ಸಮುದಾಯದ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಆದಿದ್ರಾವಿಡ ಸಮಾವೇಶ -2023 ಮಂಗಳೂರಿನ ಪುರಭವನದಲ್ಲಿ ಡಿ.24ರಂದು ಬೆಳಗ್ಗೆ 10ರಿಂದ ರಾತ್ರಿ 8ವರೆಗೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಬಾಬು ಮರಿಕೆ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ನಡೆಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಅಧ್ಯಕ್ಷ ಶಿವಾನಂದ ಬಲ್ಲಾಳ್ ಬಾಗ್ ವಹಿಸಲಿದ್ದಾರೆ. ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್, ಸಚಿವರಾದ ಡಾ. ಜಿ. ಪರಮೇಶ್ವರ್, ಡಾ. ಎಚ್. ಸಿ. ಮಹದೇವಪ್ಪ, ಯು. ಆರ್. ದಿನೇಶ್ ಗುಂಡೂರಾವ್ ಮತ್ತಿತರರು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ, ಮಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ, ಸಂಘ ಸ್ಥಾಪಕ ಹಿರಿಯ ಸದಸ್ಯರಿಗೆ ಸನ್ಮಾನ ನಡೆಯಲಿದೆ ಎಂದು ಅವರು ಮಾಹಿತಿಯನ್ನು ನೀಡಿದರು.
ಪುತ್ತೂರು ಭಾಗದಲ್ಲಿ 45ಸಾವಿರ ಮಂದಿ ಸಮಾಜ ಬಾಂದವರಿದ್ದು, ಸಮಾವೇಶಕ್ಕೆ ಪುತ್ತೂರಿನ ಸುಮಾರು 2ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸಮಾವೇಶಕ್ಕೆ ಗ್ರಾಮ ಗ್ರಾಮದಿಂದ ವಾಹನದ ವ್ಯವಸ್ಥೆ ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಗದ್ದೆಯಿಂದ 7ಗಂಟೆಗೆ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಸಮಾವೇಶದಲ್ಲಿ ಒಟ್ಟು 15ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಜಾತಿ ಪ್ರಮಾಣಪತ್ರ, ಅಭಿವೃದ್ಧಿ ಪ್ಯಾಕೇಜ್, ಆದಿದ್ರಾವಿಡ ಸಮುದಾಯ ಭವನ, ವಸತಿ ಹಾಗೂ ಕೃಷಿ ಯೋಗ್ಯ ಭೂಮಿ ಹಂಚಿಕೆ, ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಸೇರಿ ವಿವಿಧ ಹಕ್ಕೊತ್ತಾಯ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಪುತ್ತೂರು ತಾಲೂಕು ಘಟಕ ಉಪಾಧ್ಯಕ್ಷ ಜಯ ಕಾರೆಕಾಡು, ಗೌರವಾಧ್ಯಕ್ಷ ಲೋಹಿತ ಅಮ್ಚಿನಡ್ಕ, ಮಾಜಿ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಕಾರೆಕಾಡು ಉಪಸ್ಥಿತರಿದ್ದರು.