1777ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ | ಎಂಟು ದಿನಗಳ ಕಾಲ ನಡೆಯಲಿದೆ ಶಿಬಿರ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಪುತ್ತೂರು ತಾಲೂಕು ಯೋಜನೆ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ 1777ನೇ ಮದ್ಯವರ್ಜನ ಶಿಬಿರಕ್ಕೆ ಗುರುವಾರ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಚಾಲನೆ ನೀಡಲಾಯಿತು.

ಎಂಟು ದಿನಗಳ ಕಾಲ ನಡೆಯುವ ಮದ್ಯವರ್ಜನ ಶಿಬಿರಕ್ಕೆ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿ ಮಾತನಾಡಿ, ಮಹಾತ್ಮಾಗಾಂಧೀ ಅವರ ವ್ಯಸನಮುಕ್ತ ಸಮಾಜ ಕಲ್ಪನೆಯನ್ನು ತನ್ನ ದೂರದೃಷ್ಟಿತ್ವದ ಮೂಲಕ, ಧಾರ್ಮಿಕ ಕ್ಷೇತ್ರದ ಮೂಲಕ ಸಾಕಾರಗೊಳಿಸುವಲ್ಲಿ ಡಾ.ಡಿ.ವೀರೇಂದ್ರಯವರ ಕಾರ್ಯ ಮೆಚ್ಚುವಂತದ್ದು, ಇಡೀ ದೇಶದಲ್ಲಿ ಪರಿವರ್ತನೆ  ಮಾಡುವ ನಿಟ್ಟಿನಲ್ಲಿ ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಂಡು ಎಷ್ಟೋ ಕುಟುಂಬಗಳಿಗೆ ಬದುಕು ನೀಡುವ ಕೆಲಸ ಆಗಿದೆ. ಪ್ರತಿಯೊಬ್ಬ ಸ್ವಾವಲಂಬಿಯಾಗಿ ಸ್ವಾಭಿಮಾನಿ ಬದುಕು ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಮಾಡಿದ ಕಾರ್ಯ ಇಂದು ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಂತನಾಗಿ ಬದುಕಲು, ಸಮಾಜದಲ್ಲಿ ತಲೆಎತ್ತಿ ನಡೆಯವಂತೆ ಮಾಡಿದೆ ಎಂದ ಅವರು, ಇಂದು ಯೋಜನೆಯ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವ ಜತೆಗೆ, ಮದ್ಯವರ್ಜನ ಶಿಬಿರದ ಮೂಲಕ ಒಂದು ಮನೆಯನ್ನು ಉಳಿಸುವ, ಮನೆಯವರ ಕಣ್ಣೀರು ಒರೆಸುವ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಯ ಮೂಲಕ  ಆಗಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ನಮ್ಮಲ್ಲಿ ಆಸ್ತಿ, ಒಳ್ಳೆಯ ಬದುಕು ಇದ್ದರೆ ಸಾಕು. ಬೇರೊಬ್ಬ ಹಾಳಾದರೆ ನಮಗೇಕೆ ಚಿಂತೆ ಎಂಬ ಮನೋಭಾವ ಇರುವ ಪ್ರಸ್ತುತ ಕಾಲದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಎಲ್ಲರೂ ಒಳ್ಳೆಯರಾಗಬೇಕು ಮನೋಭಾವ, ಚಿಂತನೆ ಇಂದು ಎಷ್ಟೋ ಕುಟುಂಬ ನೆಮ್ಮದಿಯ ಬದುಕು ಕಾಣುವಂತಾಗಿದೆ. ಯೋಜನೆಯ ಮೂಲಕ ಜ್ಞಾನವಿಕಾಸ ಹುಟ್ಟುಹಾಕಿ ಇಂದು ಮಹಿಳೆಯರು ಹಲವಾರು ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಬದುಕುವಂತೆ ಮಾಡಿದೆ. ಅಲ್ಲದೆ ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಮುಂದೆ ಕೊಂಡೊಯ್ಯುವ ಕೆಲಸ ಆಗಿದೆ ಎಂದ ಅವರು, ಇಲ್ಲಿಯ ಮದ್ಯವರ್ಜನ ಶಿಬಿರ ಮುಗಿಸಿ ಹೊರಹೋಗುವಾಗ ಹೊಸ ವ್ಯಕ್ತಿಯಾಗಿ ನವಜೀವನ ಶುರು ಮಾಡಿ ಸಂತೋಷದ ಬದುಕು ನಡೆಸಿ ಎಂದು ಶುಭ ಹಾರೈಸಿದರು.































 
 

ಉಡುಪಿ ಪ್ರಾದೇಶಿಕ ಯೋಜನಾ ಕಚೇರಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಕಲ್ಲೇಗ ಭಾರತ್ ಮಾತಾ ಸಭಾಭವನದ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಅಖಿಲ ಭಾರತ ಜನಜಾಗೃತಿ ವೇದಿಕೆ  ದ.ಕ.ಜಿಲ್ಲಾ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಯೋಜನೆಯ ಬಿಸ.ಸಿ. ಟ್ರಸ್ಟ್ ಜಿಲ್ಲಾ ನಿರ್ದೇಶಕ ಪ್ರವೀಣ್‍ಕುಮಾರ್, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಮಹಾಬಲ ರೈ ಒಳತ್ತಡ್ಕ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಭಟ್‍ ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಶಶಿಧರ ಎಂ. ಸ್ವಾಗತಿಸಿದರು. ಕೃಷಿ ಅಧಿಕಾರಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಶ್ರುತಿ ವಂದಿಸಿದರು.

ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಟ್ರಸ್ಟ್‍ ಬೆಳ್ತಂಗಡಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಪುತ್ತೂರು ತಾಲೂಕು ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಮಂಗಳೂರು ಜಸ್ಟೀಸ್ ಕೆ.ಎಸ್‍.ಹೆಗ್ಡೆ ಆಸ್ಪತ್ರೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಿಬಿರ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top