ಪುತ್ತೂರು: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ತಾಲೂಕು ಸಮಿತಿಗಳ ಪದಪ್ರದಾನ ಸಮಾರಂಭ ಡಿ.24 ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಯುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ಹಾಗೂ ಆಯ್ದ ಸಾಧಕರನ್ನು ಸನ್ಮಾನಿಸಲಾಗುವುದು. ಅಲ್ಲದೆ ಒಕ್ಕಲಿಗ ಸ್ವಸಹಾಯ ಒಕ್ಕೂಟದ ಕೆಲವೊಂದು ಗುಂಪುಗಳ ಪದಪ್ರದಾನ ನಡೆಯಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಗಿರೀಶ್ ನಂದನ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿ, ಈ ಬಾರಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಿರಿಯ ಸಂಘ, ಯುವ ಸಂಘ ಹಾಗೂ ಮಹಿಳಾ ಸಂಘದಿಂದ ಸಾಧನೆ ಮಾಡಿದ ತಲಾ ಒಬ್ಬರನ್ನು ಗುರುತಿಸಿ ಗೌಡ ಸಾಧಕ ಪ್ರಶಸ್ತಿ ನೀಡಲಾಗುವುದು. ಈ ಬಾರಿ ಇದು ಆರಂಭಗೊಳಿಸಿದ್ದು, ಮುಂದೆ ನಿರಂತರವಾಗಿ ನಡೆಯಲಿದೆ. ಅಲ್ಲದೆ ವಿಶೇಷ ಆಕರ್ಷಣೆಯಾಗಿ 10 ಮಂದಿ ಮಹಿಲೆಯರು ಹೆಸರನ್ನು ಚೀಟಿ ಎತ್ತುವ ಮೂಲಕ ಅದೃಷ್ಟಂತ ಮಹಿಳೆ ಎಂದು ಗುರುತಿಸಿ ಪ್ರಸಾದ ರೂಪದಲ್ಲಿ ಸೀರೆಯನ್ನು ಶ್ರೀ ಸ್ವಾಮೀಜಿಯವರ ಮೂಲಕ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಖಜಾಂಚಿ ಲಿಂಗಪ್ಪ ಗೌಡ, ನಿಯೋಜಿತ ಅಧ್ಯಕ್ಷ ರವಿ ಮುಂಗ್ಲಿಮನೆ, ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಧರ ಗೌಡ ಕಣ ಜಾಲು, ಯುವ ಗೌಡ ಸೇವಾ ಸಂಘದ ನಿಯೋಜಿತ ಅಧ್ಯಕ್ಷ ಅಮರನಾಥ ಗೌಡ, ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ. ಗೌಡ ಉಪಸ್ಥಿತರಿದ್ದರು.