ಮೈಸೂರು: ದಸರಾ ಸಂಭ್ರಮವನ್ನು ಮೀರಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಮತ್ತು ಬ್ರಾಂಡ್ ಮೈಸೂರನ್ನು ಪ್ರಚಾರ ಮಾಡಲು ಉತ್ಸುಕವಾಗಿರುವ ರಾಜ್ಯ ಸರ್ಕಾರವು ಸಂಜೆ ಪ್ರವಾಸಿಗರಿಗೆ ಮೈಸೂರು ಅರಮನೆಯನ್ನು ತೆರೆಯಲು ಚಿಂತಿಸಿದ್ದು, ಇನ್ನು ಮುಂದೆ ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿಯು ರಾತ್ರಿ 9 ರವರೆಗೆ ಮೈಸೂರು ಅರಮನೆ ಪ್ರವಾಸಿಗರಿಗಾಗಿ ತೆರೆಯುವ ಬಗ್ಗೆ ಚಿಂತನೆ ನಡೆಸಿದೆ.
ಅರಮನೆ ನಗರಿ ಮೈಸೂರಿನಲ್ಲಿ ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವಕ್ಕೆ ವೇದಿಕೆ ಸಿದ್ಧವಾಗಿದೆ. ಇದರ ನಡುವೆ ಮೈಸೂರು ಅರಮನೆಯು ಪ್ರಪಂಚದಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರವು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ವರ್ಷದ 26 ವಾರಾಂತ್ಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತಿಸಿದೆ. ಈ ಹಿಂದೆ ಮೈಸೂರು ಅರಮನೆಗೆ ಸಂಜೆ 6ಗಂಟೆಯ ನಂತರ ಪ್ರವಾಸಿಗರಿಗೆ ನಿರ್ಬಂಧವಿತ್ತು. ಆದರೆ ಈಗ ರಾತ್ರಿ 9ಗಂಟೆ ವರೆಗೂ ಪ್ರವಾಸಿಗರಿಗೆ ಅರಮನೆಗೆ ಭೇಟಿ ನೀಡಲು ಅವಕಾಶ ಕೊಡಲು ಮುಂದಾಗಿದೆ.
ವೀಕೆಂಡ್ ಅಥವಾ ಒಂದು ದಿನದ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಚಾಮುಂಡಿ ಬೆಟ್ಟ ಸೇರಿದಂತೆ ಇತರೆ ಕಡೆಗಳಿಗೆ ಭೇಟಿ ನೀಡಿ ಅರಮನೆ ಭೇಟಿಗೆ ಬಂದಾಗ ಸಮಯದ ಅಭಾವದಿಂದ ಅರಮನೆಯನ್ನು ನೋಡಲಾಗದೆ ಹಿಂತಿರುವ ಬಗ್ಗೆ ತಿಳಿದುಬಂದಿದೆ. ಹೀಗಾಗಿ ಸಮಯವನ್ನು ಹೆಚ್ಚಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಇನ್ನು ಅರಮನೆ ಬಳಿ ಸಂಜೆ ವೇಳೆಯಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸುತ್ತಿದೆ. ಇನ್ನೂ ಮೂರು ಗಂಟೆಗಳ ಕಾಲ ಅರಮನೆಯನ್ನು ತೆರೆಯಲು ಒಪ್ಪಿಗೆ ಸಿಕ್ಕರೆ ಆ ಪಾಳಿಯಲ್ಲಿ ಕೆಲಸ ಮಾಡಲು ಹೆಚ್ಚುವರಿ ಸಿಬ್ಬಂದಿಯ ಅವಶ್ಯಕತೆ ಬೀಳುತ್ತದೆ. ಹೀಗಾಗಿ ಅರಮನೆ ಮಂಡಳಿಯು ವೆಚ್ಚಗಳನ್ನು ಪೂರೈಸಲು ಪ್ರವೇಶ ಟಿಕೆಟ್ ಶುಲ್ಕವನ್ನು ದ್ವಿಗುಣಗೊಳಿಸುವ ಸಾಧ್ಯತೆ ಇದೆ.