ಬೆಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರಪುರುಷರಾದ ಕೋಟಿ-ಚೆನ್ನಯರ ಹೆಸರಿನ ವಿಚಾರದಲ್ಲಿ ಮತ್ತೆ ಒತ್ತಾಯಗಳು ಕೇಳಿಬರಲಾರಂಭಿಸಿದ್ದು, ರಾಜ್ಯ ವಿಧಾನ ಪರಿಷತ್ ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಹಿಂದೆ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಕೂಡಾ ಇದೇ ಒತ್ತಾಯವನ್ನು ಮಾಡಿದ್ದಾರೆ. ಹರೀಶ್ ಕುಮಾರ್ ಈ ವಿಚಾರವಾಗಿ ಸರಕಾರವನ್ನು ಬಲವಾಗಿ ಒತ್ತಾಯಿಸಿದ್ದು,ಈ ಸಂಬಂಧ ಹೋರಾಟಕ್ಕೂ ಸಿದ್ಧವಾಗಿದ್ದೇನೆ ಎಂದು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಈ ಪ್ರಸ್ತಾಪವನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸಲಾಗಿದ್ದು, ಸರಕಾರ ಈ ಪ್ರಸ್ತಾವನೆಯನ್ನು ಆದಷ್ಟು ಬೇಗ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರಾವಳಿಯಲ್ಲಿ ಕೋಟಿ-ಚೆನ್ನಯ ಹೆಸರಿಗೆ ಎಲ್ಲಾ ಸಮುದಾಯಗಳ ಒಲವೂ ಇದೆ. ಈ ಕಾರಣಕ್ಕೆ ಸರಕಾರ ಕೇಂದ್ರಕ್ಕೆ ಈ ಹೆಸರೊಂದನ್ನೇ ಕಳುಹಿಸುವುದು ಸೂಕ್ತ ಎಂದು ಸಲಹೆಯನ್ನೂ ಶಾಸಕ ಹರೀಶ್ ಕುಮಾರ್ ಸರಕಾರಕ್ಕೆ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣಕನ್ನಡ ಜಿಲ್ಲೆಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯೂ ಹರೀಶ್ ಕುಮಾರ್ ಆಗಿದ್ದಾರೆ ಎನ್ನುವ ಮಾತುಗಳೂ ಇದೀಗ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.