ಆರೋಗ್ಯ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಟ್ಟುನಿಟ್ಟಿನ ಭದ್ರತೆಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯಕ್ಕೆ ಆಸ್ಪತ್ರೆಯ ಮಹಡಿಯಲ್ಲಿ ದಾವೂದ್ ನನ್ನು ಮಾತ್ರ ಇರಿಸಲಾಗಿದ್ದು ಹತ್ತಿರದ ಕುಟುಂಬ ಸದಸ್ಯರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ. ಆತ ವಿಷ ಸೇವಿಸಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ ಯಾವುದೇ ದೃಢೀಕರಣವಿಲ್ಲ. ಕ್ರಿಮಿನಲ್ ಚಟುವಟಿಕೆಗಳಿಗೆ ಹೆಸರಾದ ಕುಖ್ಯಾತ ವ್ಯಕ್ತಿ ಕಳೆದ ಎರಡು ದಿನಗಳಿಂದ ವೈದ್ಯಕೀಯ ಆರೈಕೆಯಲ್ಲಿದ್ದು, ವಿಷ ಸೇವಿಸಿರಬಹುದು ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದೆ.
ಭೂಗತ ಪಾತಕಿ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಮುಂಬೈ ಪೊಲೀಸರು ಆತನ ಸಂಬಂಧಿಕರಾದ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದರು.
ದಾವೂದ್ ಎರಡನೇ ವಿವಾಹ ಆದ ಬಳಿಕ ಕರಾಚಿಯಲ್ಲಿ ಇರುತ್ತಾನೆ ಎಂದು ಆತನ ಸಹೋದರಿ ಹಸೀನಾ ಪಾರ್ಕರ್ ಅವರ ಪುತ್ರ ರಾಷ್ಟ್ರೀಯ ತನಿಖಾ ಸಂಸ್ಥೆಗೆ ತಿಳಿಸಿದ್ದರು. ಆತ ಮತ್ತು ಆತನ ಉನ್ನತ ಸಹಾಯಕರು ಕರಾಚಿ ವಿಮಾನ ನಿಲ್ದಾಣವನ್ನು ನಿಯಂತ್ರಿಸುತ್ತಾರೆ ಎಂದು ಆತನ ವಿರುದ್ಧ ಚಾರ್ಜ್‌ಶೀಟ್‌ನಲ್ಲಿ ಎನ್ಐಎ ಉಲ್ಲೇಖಿಸಿದೆ.