ಕಾರ್ಕಳ: ಕಾರಿನ ಬಾಗಿಲು ತೆರೆದ ಪರಿಣಾಮ ಸ್ಕೂಟರಿನಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ಸವಾರ ಬಿದ್ದು ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ಕಾರ್ಕಳ ಕಸಬಾ ಗ್ರಾಮದಲ್ಲಿ ನಡೆದಿದೆ.
ಯಶವಂತ ಮೃತಪಟ್ಟ ಸ್ಕೂಟರ್ ಸವಾರ ಎಂದು ಗುರುತಿಸಲಾಗಿದೆ.
ರಸ್ತೆ ಬದಿ ಕಾರ್ ಅನ್ನು ಅದರ ಚಾಲಕ ರಸ್ತೆ ಬದಿ ನಿಲ್ಲಿಸಿದ್ದ. ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಗಮನಿಸದೇ ನಿರ್ಲಕ್ಷ್ಯತನದಿಂದ ತನ್ನ ಕಾರಿನ ಬಲಬದಿಯ ಬಾಗಿಲನ್ನು ತೆರೆದ ಪರಿಣಾಮ ಸಾಲ್ಮರ ಕಡೆಯಿಂದ ತಾಲೂಕು ಕಚೇರಿ ಬಳಿ ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ಸವಾರನಿಗೆ ಕಾರಿನ ಬಾಗಿಲು ಬಡಿದು ಅವರು ಸ್ಕೂಟರ್‌ನಿಂದ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗೊಂಡ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.