ಪುತ್ತೂರು: ನಗರ ಸಭೆಯ ಎರಡು ವಾರ್ಡ್ ಗಳಲ್ಲಿ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆಗೆ ಸಂಬಂಧಿಸಿ ಡಿ.27 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ಡಿ.18 ಕೊನೆಯ ದಿನವಾಗಿದೆ.
ಎರಡು ವಾರ್ಡ್ ಗಳಲ್ಲಿ ನಡೆಯುವ ಚುನಾವಣೆಗೆ ಒಟ್ಟು 6 ನಾಮಪತ್ರಗಳು ಸಲ್ಲಿಕೆಯಾಗಿವೆ. ಶನಿವಾರ ನಾಮಪತ್ರ ಪರಿಶೀಲನೆ ನಡೆಸಲಾಗಿದ್ದು, ಎಲ್ಲಾ ನಾಮಪತ್ರಗಳು ಸಿಂಧುವಾಗಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ವಾರ್ಡ್ 1 ರ ಅಭ್ಯರ್ಥಿಯಾಗಿ ಬಿಜೆಪಿಯಿಂದ ಸುನಿತಾ, ಕಾಂಗ್ರೆಸ್‌ನಿಂದ ದಿನೇಶ್ ಶೇವಿರೆ, ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಅನ್ನಪೂರ್ಣ ಎಸ್.ಕೆ. ರಾವ್ ಹಾಗೂ ವಾರ್ಡ್ ನಂ.11 ರಲ್ಲಿ ಬಿಜೆಪಿಯಿಂದ ರಮೇಶ್ ರೈ, ಕಾಂಗ್ರೆಸ್‌ನ ದಾಮೋದರ ಭಂಡಾರ್‌ಕರ್, ಪುತ್ತಿಲ ಪರಿವಾರ ಬೆಂಬಲಿತ ಚಿಂತನ್ ಪಿ. ನಾಮಪತ್ರ ಸಲ್ಲಿಸಿದ್ದಾರೆ.
ಡಿ.27ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದ್ದು, ಅವಶ್ಯವಿದ್ದರೆ ಡಿ.29 ರಂದು ಮರುಮತದಾನ ನಡೆದು ಡಿ.30 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಹೊರಬೀಳಲಿದೆ.