ಪುತ್ತೂರು: ಪುತ್ತಿಲ ಪರಿವಾರದಲ್ಲಿ ಕಾಣಿಸಿಕೊಂಡಿದ್ದ ಡಾ.ಸುರೇಶ್ ಪುತ್ತೂರಾಯ ಅವರು ನಗರಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಂದರ್ಭ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡಿದ್ದು ಇದೀಗ ಅಚ್ಚರಿಗೆ ಕಾರಣವಾಗಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಪುತ್ತಿಲ ಪರಿವಾರದಲ್ಲಿ ಪ್ರಮುಖ ನಾಯಕರಾಗಿ ಕಾಣಿಸಿಕೊಂಡಿದ್ದ ಡಾ.ಸುರೇಶ್ ಪುತ್ತೂರಾಯ ಇದೀಗ ದಿಢೀರ್ ಪಾಳಯ ಬದಲಾಯಿಸಿ ಬಿಜೆಪಿ ನಾಮಪತ್ರ ಸಂದರ್ಭ ಹಾಜರಾಗಿ ಅಭ್ಯರ್ಥಿಗಳಿಗೆ ಮಾಲಾರ್ಪಣೆ ಮಾಡಿರುವುದು ಕುತೂಹಲ ಮೂಡಿಸಿದೆ.
ನಗರಸಭೆಯ ವಾರ್ಡ್ 1 ಹಾಗೂ 11 ರ ಸದಸ್ಯರ ಮರಣದಿಂದಾಗಿ ಉಪಚುನಾವಣೆ ಡಿ.27 ರಂದು ನಿಗದಿಯಾಗಿದ್ದು, ವಾರ್ಡ್ 1 ರ ಅಭ್ಯರ್ಥಿ ಸುನೀತಾ ಹಾಗೂ ವಾರ್ಡ್ 11 ರ ಅಭ್ಯರ್ಥಿ ರಮೇಶ್ ರೈ ಶುಕ್ರವಾರ ನಗರಸಭೆಯಲ್ಲಿ ನಾಮಪತ್ರ ಸಲ್ಲಿಸಿದರು.
ಶುಕ್ರವಾರ ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಅಭ್ಯರ್ಥಿಗಳು ಹಾಗೂ ಬಿಜೆಪಿ ಮುಖಂಡರು ಪ್ರಾರ್ಥನೆ ಸಲ್ಲಿಸಿ ಬಳಿಕ ನಗರಸಭೆಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹಿರಿಯ ಬಿಜೆಪಿ ಬಿಜೆಪಿ ಮುಖಂಡ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿಯ ರಾಮದಾಸ ಹಾರಾಡಿ, ಶಶಿಕುಮಾರ್ ರೈ ಬಾಲ್ಯೊಟ್ಟು, ದಿನೇಶ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.