ಪುತ್ತೂರು: ಈಗಾಗಲೇ ನಗರಸಭೆಯ ಎರಡು ವಾರ್ಡುಗಳಲ್ಲಿಯ ಸದಸ್ಯರ ಮರಣದಿಂದ ತೆರವಾದ ಸ್ಥಾನಗಳಿಗೆ ಭಾರತೀಯ ಜನತಾ ಪಾರ್ಟಿಯಿಂದ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಎರಡೂ ವಾರ್ಡುಗಳಲ್ಲಿ ಗೆಲುವು ನಿಶ್ಚಿತ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ತಿಳಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ವಾರ್ಡು ಒಂದರಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಸಫಲ್ಯ ಅವರು ಸದಸ್ಯರಾಗಿದ್ದರು. ವಾರ್ಡು 11 ರಲ್ಲಿ ಕಾಂಗ್ರೆಸ್ ನ ಶಕ್ತಿಸಿನ್ಹ ಸದಸ್ಯರಾಗಿದ್ದರು. ಇದೀಗ ಅವರ ಮರಣದಿಂದ ವಾರ್ಡು ಒಂದರಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ತನ್ನನ್ನು ತೊಡಗಿಸಿಕೊಂಡಿರುವ ಸಮರ್ಥ ಮಹಿಳೆ ಸುನೀತಾ ಹಾಗೂ ವಾರ್ಡು 11 ರಲ್ಲಿ ಈ ಹಿಂದೆ ಪುರಸಭೆ ಸದಸ್ಯರಾಗಿದ್ದ ರಮೇಶ್ ರೈ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕಳೆದ ನಗರಸಭೆ ಚುನಾವಣೆಯಲ್ಲಿ 31 ಸ್ಥಾನದಲ್ಲಿ 25 ಸ್ಥಾನಗಳನ್ನು ಬಿಜೆಪಿ ಪಡೆದಿತ್ತು. ಕಳೆದ ಬಾರಿ ಶಾಸಕರಾಗಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ನೀರಿನ ಸಮಸ್ಯೆಯನ್ನು ಸರಿಮಾಡುವ ನಿಟ್ಟಿನಲ್ಲಿ ಜಲಸಿರಿ ಯೋಜನೆಗಾಗಿ ಸುಮಾರು 113 ಕೋಟಿ ಅನುದಾನ ತಂದಿದ್ದಾರೆ. ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಜೀವಂಧರ್ ಜೈನ್ ಅವರ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತದಿಂದಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿತ್ತು. ಈ ನಿಟ್ಟಿನಲ್ಲಿ ಡಿ.27 ರಂದು ಎರಡು ವಾರ್ಡುಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ಆತ್ಮವಿಶ್ವಾಸ ನಮಗಿದೆ ಎಂದು ತಿಳಿಸಿದ ಅವರು, ಮೊನ್ನೆ ನಡೆದ ಜಾರ್ಖಂಡ್, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಗಳಿಸಿರುವುದು ಸ್ಥಳೀಯ ಚುನಾವಣೆಗಳಿಗೆ ಪೂರಕವಾಗಲಿದೆ ಎಂದು ತಿಳಿಸಿದರು.
ನಾಳೆ ನಾಮತ್ರ ಸಲ್ಲಿಕೆ :
ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಡಿ.15 ಶುಕ್ರವಾರ ನಡೆಯಲಿದ್ದು, ಬೆಳಿಗ್ಗೆ ಬಿಜೆಪಿ ಮುಖಂಡರುಗಳು ಬೆಳಿಗ್ಗೆ 10 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಬಳಿಕ 11 ಗಂಟೆಗೆ ನಗರಸಭೆಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಮುಖಂಡ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು.