ಶಬರಿಮಲೆ ಯಾತ್ರೆ ಬುಡಮೇಲುಗೊಳಿಸಲು ಕಮ್ಯುನಿಸ್ಟರ ಸಂಚು: ಕೇಂದ್ರ ಸಚಿವ | ದಕ್ಷಿಣ ಭಾರತದ ಅತಿ ದೊಡ್ಡ ತೀರ್ಥ ಕ್ಷೇತ್ರದಲ್ಲಿ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರಕಾರ ವಿಫಲವಾಗಿದೆಯೆಂದ ಸಚಿವರು

ಶಬರಿಮಲೆ ಯಾತ್ರೆ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಎಡರಂಗ ಸರಕಾರ ಶ್ರಮಿಸುತ್ತಿದೆ. ನಾಸ್ತಿಕರಾದ ಕಮ್ಯೂನಿಸ್ಟರು ಶಬರಿಮಲೆಗೆ ಭಕ್ತರು ಬರದಂತೆ ಸಂಚು ರೂಪಿಸಿದ್ದಾರೆ. ಇದು ಹಿಂದೂ ಸಂಪ್ರದಾಯದ ಮೇಲಿನ ಅತಿಕ್ರಮಣ ಎಂದು ಕೇಂದ್ರ ಸಚಿವ ವಿ. ಮುರಳೀಧರನ್ ಆರೋಪಿಸಿದ್ದಾರೆ.

ಶಬರಿಮಲೆಯಲ್ಲಿ ಭಕ್ತರ ಸಂಕಷ್ಟದ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಶಬರಿಮಲೆಯ ಪಾವಿತ್ರ್ಯವನ್ನು ಹಾಳು ಮಾಡುವುದು ಸಿಪಿಎಂ ಅಜೆಂಡಾ ಹಾಗೂ ಇದರ ಪ್ರಯತ್ನ ನಡೆಯುತ್ತಿದೆ. ಇದು ಸಂಪ್ರದಾಯದ ಉಲ್ಲಂಘನೆ ಎಂದು ವಿ. ಮುರಳೀಧರನ್ ಹೇಳಿದ್ದಾರೆ.

ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಕೇರಳ ಸರಕಾರ ಮಾಡುತ್ತಿರುವ ಅನ್ಯಾಯವನ್ನು ತೀವ್ರವಾಗಿ ಖಂಡಿಸುತ್ತೇನೆ. ವ್ರತಾನುನಿಷ್ಟೆಯಿಂದ ಬರುವ ಅಯ್ಯಪ್ಪ ಭಕ್ತರ ಮೇಲೆ ಕಮ್ಯುನಿಸ್ಟ್ ಸರಕಾರ ಸೇಡು ತೀರಿಸಿಕೊಳ್ಳುತ್ತಿದೆ. ದೇವಸ್ವಂ ಸಚಿವರು ನವ ಕೇರಳ ಸದಸ್ಯರ ಹೆಸರಲ್ಲಿ ಅಲೆದಾಡುತ್ತಿದ್ದಾರೆ. ಸ್ವದೇಶ್ ದರ್ಶನ್ ಯೋಜನೆಯಡಿ ಶಬರಿಮಲೆಗೆ ಆದ್ಯತೆ ನೀಡಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಶಬರಿಮಲೆ ಅಭಿವೃದ್ಧಿಗೆ 2016ರ ಬಳಿಕ ಮಂಜೂರು ಮಾಡಿದ 100 ಕೋಟಿ ರೂ.ಗಳನ್ನು ಕೇರಳ ಸರಕಾರ ಏನು ಮಾಡಿದೆ ಎಂಬುದನ್ನು ದೇವಸ್ವಂ ಮತ್ತು ಪ್ರವಾಸೋದ್ಯಮ ಸಚಿವರು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವರು ಆಗ್ರಹಿಸಿದ್ದಾರೆ.































 
 

ದಕ್ಷಿಣ ಭಾರತದ ಅತಿ ದೊಡ್ಡ ತೀರ್ಥಾಟನೆ ಕೇಂದ್ರಕ್ಕೆ ಬರುವ ಯಾತ್ರಾರ್ಥಿಗಳು ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೇಂದ್ರ ಮುಂತಾದ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಕೇಂದ್ರ ಸರಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸುವವರಿಗೆ ಅಯ್ಯಪ್ಪ ಭಕ್ತರು ನಿಜ ಸ್ಥಿತಿ ಮನವರಿಕೆ ಮಾಡಬೇಕು. ಉದ್ದೇಶಪೂರ್ವಕವಾಗಿ ಶಬರಿಮಲೆ ಯಾತ್ರಾರ್ಥಿಗಳ ತಾಳ್ಮೆಯನ್ನು ಪರೀಕ್ಷಿಸ ಹೊರಟರೆ ಮತ್ತೆ ಪರಿಸ್ಥಿತಿ ಜಟಿಲವಾಗಲಿದೆ ಎಂದು ಕೇಂದ್ರ ಸಚಿವರು ಕೇರಳ ಸರಕಾರವನ್ನು ಎಚ್ಚರಿಸಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆಗಳಿಂದ ಅಯ್ಯಪ್ಪ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಿದ್ದಾರೆ. ಆದರೆ ಇಲ್ಲಿ ಜನಜಂಗುಳಿಯನ್ನು ನಿಯಂತ್ರಿಸುವ ವ್ಯವಸ್ಥೆಯೇ ಇಲ್ಲ ಎಂದು ಆರೋಪಿಸಲಾಗಿದೆ. ವಿಪರೀತ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿರುವುದರಿಂದ ಹೆಚ್ಚಿನವರು ದರ್ಶನ ಸಾಧ್ಯವಾಗದೆ ಹಾಗೆಯೇ ವಾಪಸಾಗುತ್ತಿದ್ದಾರೆ. ಪಾರ್ಕಿಂಗ್ ಮೈದಾನದಿಂದ ದೇವಸ್ಥಾನಕ್ಕೆ ತೆರಳಲು ಸಾರಿಗೆ ಬಸ್ಗಳ ಕೊರತೆಯಿಂದ ಭಕ್ತರ ಪರದಾಟ ಹೆಚ್ಚಿದೆ.

ಕೇರಳದಲ್ಲಿನ ವಿರೋಧ ಪಕ್ಷ ಕಾಂಗ್ರೆಸ್ ಕೂಡ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆದಿದೆ. ದೇಶದ ಅತ್ಯಂತ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶಬರಿಮಲೆಯಲ್ಲಿ ಭಕ್ತರ ಸುಗಮ ಸಂಚಾರಕ್ಕಾಗಿ ಸೂಕ್ತ ಗಮನ ಹರಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಆರೋಪಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top