ಪುತ್ತೂರು: ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಬಾದಾಮಿ ಡಾಣಕಶಿರೂರು ಮೂಲದ ಹನುಮಂತ ಮಾದರ (22) ಎಂಬವರ ಕೊಲೆ ಪ್ರಕರಣದ ಮೂರನೇ ಆರೋಪಿ ದುರ್ಗಪ್ಪ ಮಾದರ (42) ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ ಅಪಹರಣಕ್ಕೆ ಬಳಸಿದ್ದ ವಾಹನ ಮತ್ತು ಕೊಲೆ ಮಾಡಲು ಬಳಸಲಾಗಿದ್ದ ರಾಡ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟೆ ಡಾಣಕಶಿರೂರು ರೇಣವ್ವ ಮತ್ತು ಸುರೇಶರವರ ಮಗ ಹನುಮಂತ ಮಾದರ(22) ಅವರನ್ನು ಕುಂಬ್ರದಿಂದ ಮೂವರು ಸೇರಿ ವಾಹನವೊಂದರಲ್ಲಿ ಕರೆದೊಯ್ದು ಕೊಲೆ ಮಾಡಿ ಆಗುಂಬೆ ಘಾಟ್ ಸಮೀಪ ಎಸೆದು ಹೋಗಿದ್ದರು ಎಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಡಾಣಕಶಿರೂರು ನಿವಾಸಿ ಹನುಮಪ್ಪ ಮಾದರ ಅವರ ಪುತ್ರ ಶಿವಪ್ಪ ಹನುಮಪ್ಪ ಮಾದರ (42) ಹಾಗೂ ಗದಗ ಜಿಲ್ಲೆಯ ರೋಣ ತಾಲೂಕು ಜಗಳೂರು ಗ್ರಾಮ ಅಂಬೇಡ್ಕರ್ ನಗರ ಹನುಮಪ್ಪ ಮಾದರ ಅವರ ಮಗ ಮಂಜುನಾಥ ಹನುಮಪ್ಪ ಮಾದರ (32) ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಇನ್ನೋರ್ವ ಆರೋಪಿ ಬೆಳಗಾವಿ ರಾಮದುರ್ಗಾ ಗ್ರಾಮದ ಮನೇನಕೊಪ್ಪ ನಿವಾಸಿ ದುರ್ಗಪ್ಪ ಮಾದರ (42) ಪರಾರಿಯಾಗಿದ್ದ. ಇದೀಗ ಆತನನ್ನೂ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಸಿ.ಐ. ರವಿ ಬಿ.ಎಸ್. ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹನುಮಂತ ಮಾದರ ಅವರನ್ನು ಕುಂಬ್ರದ ಬಾಡಿಗೆ ಮನೆಯಿಂದ ಕರೆದೊಯ್ಯಲಾಗಿದ್ದ ಮಹೇಂದ್ರ ಮ್ಯಾಕ್ಸಿಂ ವಾಹನವನ್ನು ಪೆಟ್ರೋಲ್ ಪಂಪ್ ಒಂದರ ಬಳಿಯಿಂದ ಮತ್ತು ಕೊಲೆ ಮಾಡಲು ಉಪಯೋಗಿಸಿದ ರಾಡನ್ನು ಆಗುಂಬೆ ಘಾಟಿಯಲ್ಲಿ ಪೊಲೀಸರು ಬಂಧಿತ ದುರ್ಗಪ್ಪ ಮಾದರನ ಮೂಲಕ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.