ಮಂಗಳೂರು: ಮಂಗಳಾದೇವಿ ನೆಲೆಯಾಗಿರುವ ಕ್ಷೇತ್ರ ಮಂಗಳಾಪುರ. ಈ ಮಂಗಳಾಪುರವೇ ಮುಂದೆ ಮಂಗಳೂರು ಎಂದಾಯಿತು ಎನ್ನುತ್ತವೆ ಇತಿಹಾಸ.
ಇಂತಹ ಐತಿಹಾಸಿಕ, ಧಾರ್ಮಿಕ ಕ್ಷೇತ್ರದ ಹೆಸರನ್ನು ಗೂಗಲ್ ಮ್ಯಾಪಿನಲ್ಲಿ ತಿದ್ದಿರುವ ಘಟನೆ ನಡೆದಿದ್ದು, ಆಕ್ರೋಶ ವ್ಯಕ್ತವಾಗಿದೆ.
ಬೋಳಾರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಹೆಸರನ್ನು ಗೂಗಲ್ ಮ್ಯಾಪ್‌ನಲ್ಲಿ “ಬೋಳಾರ್ ಶೇಕ್ ಉಮರ್ ಸಾಹೇಬ್ ಕಾಂಪೌಂಡು’ ಎಂದು ಬರೆದಿರುವುದು ಇದೀಗ ಬೆಳಕಿಗೆ ಬಂದಿದೆ.
ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತರುವ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯನ್ನುಂಟು ಮಾಡುವ ಮತ್ತು ಸಾಮರಸ್ಯವನ್ನು ಭಂಗ ಗೊಳಿಸುವ ದುರುದ್ದೇಶದಿಂದ ಈ ರೀತಿ ತಿದ್ದಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಗೂಗಲ್ ಮ್ಯಾಪ್‌ನಲ್ಲಿ “ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ’ ಎಂದು ತಿದ್ದುಪಡಿ ಮಾಡಿ ಸರಿಪಡಿಸಿಕೊಡಬೇಕು ಎಂದು ಮಂಗಳೂರಿನ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.