ಪುತ್ತೂರು: ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಮರಹತ್ತುವ ಯಂತ್ರವನ್ನು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆರ್ಟಿಫೀಶಿಯನ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
ಆಧುನಿಕ ಜೀವನ ಪದ್ದತಿಗೆ ಮಾರುಹೋಗಿರುವ ಯುವ ಜನತೆ ಕೃಷಿ ಕ್ಷೇತ್ರವನ್ನು ಕಡೆಗಣಿಸಿದೆ. ಇದರಿಂದಾಗಿ ಕೆಲವು ವಿಷಯಗಳಲ್ಲಿ ನುರಿತ ಕೆಲಸಗಾರರೇ ಸಿಗುತ್ತಿಲ್ಲ. ಅಡಿಕೆಗೆ ಔಷದ ಸಿಂಪಡಣೆ ಅಡಿಕೆ ಕೊಯ್ಲು, ತೆಂಗಿನಕಾಯಿ ಕೊಯ್ಲು ಮುಂತಾದ ನಾಜೂಕಿನ ಕೆಲಸಗಳನ್ನು ಬೆರಳೆಣಿಯಷ್ಟು ಮಂದಿಯಷ್ಟೇ ಮಾಡುತ್ತಿದ್ದಾರೆ. ಈ ಸಮಸ್ಯೆಗಳನ್ನು ಮನಗಂಡು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆರ್ಟಿಫೀಶಿಯನ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳ ತಂಡವು ಹೊಸ ಆಲೋಚನೆಯೊಂದಿಗೆ ಇದಕ್ಕೊಂದು ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ತಯಾರಿಸಿದ್ದಾರೆ. ಈ ಯೋಜನಾ ವರದಿಗೆ ಸ್ಟಾರ್ಟ್ ಅಪ್ ಚಾಲೆಂಜಸ್ ಸ್ಪರ್ಧೆಯಲ್ಲಿ 1 ಲಕ್ಷ ರೂ.ಗಳ ನಗದು ಬಹುಮಾನ ಲಭಿಸಿದೆ.
ಕೆಎಸ್ಡಿಸಿ ಕರ್ನಾಟಕ ಸರ್ಕಾರ, ಯುಎನ್ಡಿಪಿ, ಕೌಶಲ್ಯ ಕರ್ನಾಟಕ, ಸೆವೆನ್ತ್ ಸೆನ್ಸ್, ಎಸ್ಎಪಿ ಲ್ಯಾಬ್ಸ್ ಇಂಡಿಯಾ ಲಿಮಿಟೆಡ್, ಕೋಡ್ ಉನ್ನತಿ ಮತ್ತು ಎಜೆಐಇಟಿ ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರಿನ ಎ.ಜೆ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಯೋಜನೆಯನ್ನು ಮಂಡಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಮರಹತ್ತುವ ಈ ಯಂತ್ರ ಮರ ಹತ್ತಿ ಕೊಯ್ಲು ಮಾಡುವ ಕೆಲಸವನ್ನಷ್ಟೇ ಮಾಡುವುದಲ್ಲದೆ, ಫಸಲು ಕಟಾವಿಗೆ ಸಿದ್ದವಾಗಿದೆಯೇ ಎನ್ನುವುದನ್ನೂ ಪರೀಕ್ಷಿಸುತ್ತದೆ. ಹೆಚ್ಚು ಇಳುವರಿಯನ್ನು ಪಡೆಯುವ ನಿಟ್ಟಿನಲ್ಲಿ ಯಾವ ಪೋಷಕಾಂಶಗಳನ್ನು ಯಾವ ಪ್ರಮಾಣದಲ್ಲಿ ಬಳಸಬೇಕು, ಫಸಲಿಗೆ ಅಥವಾ ಮರಕ್ಕೆ ಬಂದಿರುವ ಹಾಗೂ ಬರಬಹುದಾದ ರೋಗಗಳ ಬಗ್ಗೆ ಮತ್ತು ನಿವಾರಣೆಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ಈ ಯಂತ್ರವು ಪರೀಕ್ಷಾ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ವರದಾನವಾಗಬಲ್ಲದು ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳಾದ ರವಿನಾರಾಯಣ, ಆದಿತ್ಯ ಶರ್ಮ, ಸುಬ್ರಮಣ್ಯ ಮತ್ತು ಶಶಾಂಕ್ ಬಿ.ಎಸ್. ಅವರ ತಂಡವು ಕಾಲೇಜಿನ ಆರ್ಟಿಫೀಶಿಯನ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥ ಡಾ. ಗೋವಿಂದರಾಜ್ ಪಿ. ಹಾಗೂ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ. ಮನುಜೇಶ್ ಬಿ.ಜೆ. ಅವರ ಮಾರ್ಗದರ್ಶನದಲ್ಲಿ ಇದನ್ನು ತಯಾರಿಸಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ ಕೆ. ತಿಳಿಸಿದ್ದಾರೆ.