ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡ ಅವರಿಗೆ ಅಸಮಾಧಾನಿತ ಹಾಗೂ ಉಚ್ಛಾಟಿತ ನಾಯಕರು ಸೆಡ್ಡು ಹೊಡೆದಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ ಉಚ್ಛಾಟಿತ ನಾಯಕ ಸಿ.ಕೆ. ನಾಣು ಅವರನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರಿನ ಕೆ.ಜಿ. ಹಳ್ಳಿಯ ಖಾಸಗಿ ಹೋಟೆಲ್ನಲ್ಲಿ ಸಿ.ಎಂ. ಇಬ್ರಾಹಿಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿ.ಕೆ. ನಾಣು ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಸಿ.ಎಂ ಇಬ್ರಾಹಿಂ ಮಾಹಿತಿ ನೀಡಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಜೆಡಿಎಸ್ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಸಿ.ಕೆ.ನಾಣು ಅವರನ್ನು ನೇಮಕ ಮಾಡಲಾಗಿದೆ. ಇದು ನನ್ನ ನಿರ್ಣಯ ಅಲ್ಲ, ರಾಷ್ಟ್ರೀಯ ಕೌನ್ಸಿಲ್ ನಿರ್ಣಯ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ. ಸಮಾವೇಶಕ್ಕೆ ಅಖಿಲೇಶ್, ನಿತೀಶ್, ರಾಹುಲ್ ಗಾಂಧಿಗೆ ಆಹ್ವಾನ ನೀಡಲಾಗುವುದು. ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕವನ್ನು ನಾಣು ಅವರಿಗೆ ನೀಡಲಾಗಿದೆ ಎಂದು ಹೇಳಲಾಗಿದೆ.
ಡಿಸೆಂಬರ್ 9ರಂದು ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸಿ.ಎಂ. ಇಬ್ರಾಹಿಂ ಹಾಗೂ ಪಕ್ಷದ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ. ನಾಣು ಅವರನ್ನು ಕೂಡ ಉಚ್ಚಾಟನೆ ಮಾಡಲಾಗಿತ್ತು. ಆದರೆ ಇದೀಗ ಉಚ್ಛಾಟಿತ ನಾಯಕರೇ ದೇವೇಗೌಡ್ರಿಗೆ ತೊಡೆ ತಟ್ಟಿದ್ದು, ಪರ್ಯಾಯವಾಗಿ ಪದಾಧಿಕಾರಗಳ ನೇಮಕ ಪ್ರಕ್ರಿಯೆ ನಡೆಸಿದ್ದಾರೆ.