ಆರ್ಟಿಕಲ್ 370 ರದ್ದು: ಸುಪ್ರೀಂ ಮಹತ್ವದ ತೀರ್ಪಿಗೆ ಕ್ಷಣಗಣನೆ! | ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತೆ

ಶ್ರೀನಗರ: ಆರ್ಟಿಕಲ್ 370 ರದ್ದಿನ ವಿರುದ್ಧ ಸುಪ್ರೀಂ ಕೋರ್ಟ್ ನಡೆಸಿದ ವಿಚಾರಣೆಯ ತೀರ್ಪು ಕೆಲವೇ ಕ್ಷಣಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.

2019ರಲ್ಲಿ ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಮಾಡುವ ಮೂಲಕ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿತ್ತು. ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದವು.

ಹಲವು ಸುತ್ತಿನ ವಾದ-ವಿವಾದಗಳ ನಂತರ ಇಂದು ಸೋಮವಾರ ಸುಪ್ರೀಂ ಕೋರ್ಟ್ ಈ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಲಿದೆ.  ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಈ ಹಿನ್ನೆಲೆಯಲ್ಲಿ ಇಂದು ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ತೀವ್ರ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.































 
 

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ನಾವು ಯಾವ ಭರವಸೆ ಇಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಅಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆಯೋ ಅದೇ ಭರವಸೆ ಇಂದು ಕೂಡ ಇದೆ. ನಮಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದಿದ್ದಾರೆ.

ಒಂದು ವೇಳೆ ಸುಪ್ರೀಂ ಕೋರ್ಟ್ ತೀರ್ಪು ನಮ್ಮ ವಿರುದ್ಧವಾಗಿ ಬಂದರೆ ಸಂವಿಧಾನದ ಚೌಕಟ್ಟಿನೊಳಗೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಶಾಂತಿಯುತವಾಗಿ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

ಪೊಲೀಸರಿಂದ ತೀವ್ರ ಭದ್ರತೆ

ಇಂದಿನ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ,  ರಾಜಕಾರಣಿಗಳಂತೆ ಇಲ್ಲಿನ ನಿವಾಸಿಗಳೂ ಕೂಡ ಇಂದಿನ ತೀರ್ಪಿನ ಬಗ್ಗೆ ಆತಂಕ, ಕುತೂಹಲದಲ್ಲಿದ್ದಾರೆ ಎಂದರು.

ಇದು ಡಿ-ಡೇ, ಮಿಲಿಟರಿ ದಾಳಿ ಅಥವಾ ಇತರ ಪ್ರಮುಖ ಘಟನೆ ನಡೆಯಬಹುದಾದ ದಿನವಾಗಿದೆ. ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ನಿವೃತ್ತ ಶಿಕ್ಷಕ ಅಬ್ದುಲ್ ಗಫಾರ್ ಹೇಳಿದರು.

ಉದ್ಯಮಿ ಜಾವೇದ್ ಅಹ್ಮದ್ ಅವರು ನಾಲ್ಕು ವರ್ಷಗಳ ನಂತರ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎನ್ನುತ್ತಾರೆ. 

ಈ ಮಧ್ಯೆ, ಪೊಲೀಸರು ಕಣಿವೆ ರಾಜ್ಯದಲ್ಲಿ ತೀವ್ರ ಎಚ್ಚರ ವಹಿಸಿದ್ದಾರೆ.  ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳ ಮೇಲೆ ನಿಗಾ ಇರಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top