ಪುತ್ತೂರು: ನಿತ್ಯ ಶ್ರೀರಾಮ ತಾರಕ ಮಂತ್ರ ಜಪದ ಮೂಲಕ ಪ್ರತಿಯೊಬ್ಬ ಹಿಂದೂ ತನ್ನ ಮನೆಯನ್ನೇ ರಾಮಮಂದಿರ ಮಾಡಿಕೊಳ್ಳುವ ಮೂಲಕ ಹಿಂದೂ ಸಮಾಜದ ಉದ್ಧಾರಕ್ಕೆ ಪಣತೊಡಬೇಕಾದ ಅಗತ್ಯವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಅವರು ಭಾನುವಾರ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಯೋಧ್ಯೆ ರಾಮಜನ್ಮಭೂಮಿಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಪುತ್ತೂರು ನಗರದಿಂದ ಉಪವಸತಿ ಕೇಂದ್ರಕ್ಕೆ ವಿತರಿಸುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರೀ ರಾಮ ತಾರಕ ಮಂತ್ರದ ಜತೆಗೆ ಧ್ಯಾನ ಮಾಡುವ ಮೂಲಕ ಪಾಪ ಕಳೆಯಲು ಸಾಧ್ಯ. ಇದೀಗ ನೈಜವಾದ ಹಿಂದೂ ಸಮಾಜ ಸದೃಢವಾಗುತ್ತಿರುವ ಕಾಲಘಟ್ಟದಲ್ಲಿದೆ. ಇದಕ್ಕೆ ಶ್ರೀ ರಾಮ ಜನ್ಮಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯ ರಾಮ ಮಂದಿರವೇ ಸಾಕ್ಷಿ ಎಂದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಪವಿತ್ರ ಮಂತ್ರಾಕ್ಷತೆಗೆ ಆರತಿ ಬೆಳಗಿದರು.
ಆರ್‍ಎಸ್‍ಎಸ್ ನಗರ ಸಂಘ ಚಾಲಕ ಶಿವಪ್ರಸಾದ್ ಎ. ಮುಂದೆ ಮಾಡಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಜ.1 ರ ತನಕ ಅಕ್ಷತೆಗೆ ಪ್ರತಿನಿತ್ಯ ಪೂಜೆ ನಡೆಯಬೇಕು, ಜ.2 ರಂದು ಅಕ್ಷತೆ ಮನೆ ಮನೆ ತಲುಪಲಿದೆ. ಅಕ್ಷತೆ ನೀಡುವಾಗ ಶ್ರೀ ರಾಮ ತಾರಕ ಮಂತ್ರ ಜಪಿಸಿ ಅಕ್ಷತೆಯನ್ನು ನೀಡಬೇಕು, ಜ,.22 ಶ್ರೀರಾಮ ಪ್ರಾಣ ಪ್ರತಿಷ್ಠೆಯಂದು ಪ್ರತೀ ಹಿಂದೂ ಮನೆಯಲ್ಲಿ ಐದು ದೀಪಗಳನ್ನು ಉರಿಸಿ, ಉತ್ತದ ದಿಕ್ಕಿಗೆ ಮುಖಮಾಡಿ ಆರತಿ ಬೆಳಗಬೇಕು ಹೀಗೆ ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕ್ಷೇತ್ರೀಯ ಸತ್ಸಂಗ ಪ್ರಮುಖ್ ಮಹಾಬಲೇಶ್ವರ ಹೆಗಡೆ ಉಪಸ್ಥಿತರಿದ್ದರು. ಬಳಿಕ ಪವಿತ್ರ ಅಕ್ಷತೆಯನ್ನು ಬೂತ್ ಪ್ರಮುಖರಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಜಿಲ್ಲಾ ಅಧ್ಯಕ್ಷ ರವೀಂದ್ರ ಪಿ. ಮುಂತಾದವರು ಉಪಸ್ಥಿತರಿದ್ದರು. ಬಜರಂಗದಳ ಪುತ್ತೂರು ಪ್ರಖಂಡ ಸಂಯೋಜಕ ವಿಶಾಖ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.